ಮಂಗಳೂರು: ಕಳೆದ ಮೂರು ದಿನಗಳಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಅರಬ್ಬೀ ಸಮುದ್ರದ ಪೂರ್ವಭಾಗದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆ, ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಸೋಮವಾರದವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಭಾಗದಲ್ಲಿ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆಯ ಅಬ್ಬರ ಜೋರಾಗಿದೆ. ಉಪ್ಪಿನಂಗಡಿ, ಪುತ್ತೂರು ತಾಲೂಕುಗಳ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಅಘನಾಶಿನಿ, ಗಂಗಾವಳಿ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕುಕ್ಕೆ ಸುಬ್ರಮಣ್ಯದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಹಲವು ಸೇತುವೆಗಳು ಮುಳುಗುವ ಅಪಾಯದಲ್ಲಿವೆ. ಭಾರಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಉಡುಪಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದೆ. ಉಡುಪಿಯ ಮೂಡನಿಡಂಬೂರು ಪ್ರದೇಶ ಜಲಾವೃತಗೊಂಡಿದ್ದು, ಬನ್ನಂಜೆ ಮಠದಬೆಟ್ಟು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕೃಷ್ಣಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶ ಕೆರೆಯಂತಾಗಿದೆ. ಕುಂದಾಪುರ, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ, ಬೈಂದೂರು ತಾಲೂಕುಗಳಲ್ಲಿ ಮಳೆಯ ಅಬ್ಬರ ಹೆಚ್ಚಿದೆ.
ಕೊಡಗಿನಲ್ಲಿ ವರ್ಷಧಾರೆ, ಹಾರಂಗಿ ಬಹುತೇಕ ಭರ್ತಿ
ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತವಾಗಿರುವ ಕೊಡಗಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಭಾಗಮಂಡಲ, ನಾಪೊಕ್ಲು ಭಾಗದಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಜೀವ ನದಿ ಕಾವೇರಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಳೆ ಹೆಚ್ಚಾಗುತ್ತಿರುವ ಕಾರಣ ಕಾವೇರಿ ನದಿ ಸೇರಿದಂತೆ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ.
ಕುಶಾಲನಗರದ ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ 2500 ಕ್ಯೂಸೆಕ್ ನೀರು ಬಿಡಲಾಗಿದೆ. ಜಲಾಶಯ ಗರಿಷ್ಟ ಮಟ್ಟ 2859 ಅಡಿ ಆಗಿದ್ದು, ಇಂದು ಬೆಳಿಗ್ಗೆ ನೀರಿನ ಮಟ್ಟ 2854 ಅಡಿ ಸಂಗ್ರಹವಾಗಿದೆ. ಹೀಗಾಗಿ ಡ್ಯಾಂ ತುಂಬಲು ಇನ್ನು ಕೇವಲ 5 ಅಡಿ ಬಾಕಿ ಇದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಭಾಗಮಂಡಲದ ತ್ರಿವೇಣಿ ಸಂಗಮವೂ ಭರ್ತಿಯಾಗಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ
ಮಹಾರಾಷ್ಟ್ರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ಇದೇ ರೀತಿಯ ಮಳೆ ಮುಂದುವರಿಯಲಿದೆ ಎನ್ನಲಾಗಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಪುಣೆ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ನದಿ ಅಂಚಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.








