ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಕಾಮೆಂಟ್ಸ್ ಗಿಟ್ಟಿಸಿಕೊಳ್ಳಲು ಇಂದಿನ ಯುವಪೀಳಿಗೆ ಯಾವ ಹಂತಕ್ಕೆ ಬೇಕಾದರೂ ಇಳಿಯಲು ಸಿದ್ಧರಿದ್ದಾರೆ ಎಂಬುದಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಂತಿದೆ. ಕೇವಲ ಒಂದು ರೀಲ್ಸ್ ವಿಡಿಯೋಗಾಗಿ ವಯಸ್ಸಾದ ತಂದೆಯನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಬಂದು, ಕೊರಿಯರ್ ಆಫೀಸ್ ನಲ್ಲಿ ಪಾರ್ಸೆಲ್ ಮಾಡಿ ಎಂದು ಹೇಳುವ ಮೂಲಕ ಯುವಕರ ಗುಂಪೊಂದು ವಿಕೃತಿ ಮೆರೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸಾರ್ವಜನಿಕರನ್ನು ಮತ್ತು ಕೊರಿಯರ್ ಸಿಬ್ಬಂದಿಯನ್ನು ದಂಗಾಗಿಸಿದೆ.
ವೈಯಾಲಿಕಾವಲ್ ಸಮೀಪದ ವಿನಾಯಕ ವೃತ್ತದಲ್ಲಿರುವ ಖಾಸಗಿ ಕೊರಿಯರ್ ಕಚೇರಿಯೊಂದಕ್ಕೆ ಮಂಗಳವಾರ ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ ಐವರು ಯುವಕ-ಯುವತಿಯರ ತಂಡವೊಂದು ಆಗಮಿಸಿತ್ತು. ಅವರ ಕೈಯಲ್ಲಿ ಒಂದು ದೊಡ್ಡ ಗೋಣಿಚೀಲವಿತ್ತು. ಕಚೇರಿಗೆ ಬಂದವರು ಸಿಬ್ಬಂದಿಯ ಬಳಿ, ನಮ್ಮ ಬಳಿ ಇರುವ ಈ ಚೀಲವನ್ನು ಬೇರೆ ಊರಿಗೆ ಪಾರ್ಸೆಲ್ ಮಾಡಬೇಕಿದೆ, ಎಷ್ಟು ಹಣವಾದರೂ ಪರವಾಗಿಲ್ಲ ಇದನ್ನು ಕಳುಹಿಸಿಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಅಲುಗಾಡುತ್ತಿದ್ದ ಚೀಲ ನೋಡಿ ಬೆಚ್ಚಿಬಿದ್ದ ಸಿಬ್ಬಂದಿ
ಗ್ರಾಹಕರು ತಂದಿದ್ದ ಆ ದೊಡ್ಡ ಚೀಲ ಇದ್ದಕ್ಕಿದ್ದಂತೆ ಅಲುಗಾಡಲಾರಂಭಿಸಿದೆ. ಇದನ್ನು ಗಮನಿಸಿದ ಕೊರಿಯರ್ ಸಿಬ್ಬಂದಿಗೆ ಅನುಮಾನ ಉಂಟಾಗಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬಲವಂತವಾಗಿ ಆ ಚೀಲವನ್ನು ಬಿಡಿಸಿ ನೋಡಿದ್ದಾರೆ. ಚೀಲದ ಬಾಯಿ ತೆರೆಯುತ್ತಿದ್ದಂತೆಯೇ ಕಂಡ ದೃಶ್ಯ ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು. ಆ ಕಿರಿದಾದ ಗೋಣಿಚೀಲದೊಳಗೆ ಜೀವಂತ ವೃದ್ಧರೊಬ್ಬರನ್ನು ತುಂಬಲಾಗಿತ್ತು! ಉಸಿರಾಟಕ್ಕೆ ತೊಂದರೆಯಾಗಿ ಆ ವೃದ್ಧ ಒದ್ದಾಡುತ್ತಿರುವುದನ್ನು ಕಂಡು ಸಿಬ್ಬಂದಿ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಮಾನವೀಯತೆ ಮರೆತ ಯುವಕರ ತಂಡ
ಚೀಲದೊಳಗಿದ್ದ ವೃದ್ಧನ ಪರಿಸ್ಥಿತಿ ಕಂಡು ಮರುಕ ಪಟ್ಟ ಕೊರಿಯರ್ ಸಿಬ್ಬಂದಿ, ಕೂಡಲೇ ಅವರಿಗೆ ನೀರು ಕುಡಿಸಿ ಉಪಚರಿಸಿದ್ದಾರೆ. ಆದರೆ, ಇಷ್ಟೆಲ್ಲಾ ನಡೆದರೂ ಆ ಯುವಕರ ತಂಡಕ್ಕೆ ತಮ್ಮ ತಪ್ಪಿನ ಅರಿವಾಗಲೇ ಇಲ್ಲ. ಬದಲಿಗೆ, ಆ ವ್ಯಕ್ತಿಯನ್ನು ಬೇರೆ ರಾಜ್ಯಕ್ಕೆ ಪಾರ್ಸೆಲ್ ಮಾಡಲೇಬೇಕು, ಅದಕ್ಕೆ ತಗಲುವ ಹಣವನ್ನು ನಾವು ನೀಡುತ್ತೇವೆ ಎಂದು ವಾದ ಮಾಡಲು ಶುರುಮಾಡಿದ್ದಾರೆ. ಜೀವಂತ ವ್ಯಕ್ತಿಯನ್ನು ಪಾರ್ಸೆಲ್ ಮಾಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಖಡಾಖಂಡಿತವಾಗಿ ನಿರಾಕರಿಸಿದಾಗ, ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಿಬ್ಬಂದಿ ತಕ್ಷಣ ವೈಯಾಲಿಕಾವಲ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರ ಹೆಸರು ಕೇಳುತ್ತಿದ್ದಂತೆಯೇ ಆ ಗುಂಪು ಅಲ್ಲಿಂದ ಕಾಲ್ಕಿತ್ತಿದೆ.
ಸಿಸಿಟಿವಿ ದೃಶ್ಯದಿಂದ ಬಟಾಬಯಲಾಯ್ತು ಸತ್ಯ
ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೊರಿಯರ್ ಕಚೇರಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ದೃಶ್ಯಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದಾಗ ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ. ಈ ಕೃತ್ಯ ಎಸಗಿದವರು ಬೇರಾರೂ ಅಲ್ಲ, ಚೀಲದಲ್ಲಿದ್ದ ವೃದ್ಧರ ಸ್ವಂತ ಕುಟುಂಬದವರೇ ಎಂಬುದು ತಿಳಿದುಬಂದಿದೆ. ವಿಚಾರಣೆ ವೇಳೆ ಇದು ಪ್ರ್ಯಾಂಕ್ ವಿಡಿಯೋ (Prank Video) ಮಾಡಲು ನಡೆಸಿದ ನಾಟಕ ಎಂದು ಯುವಕರ ತಂಡ ಒಪ್ಪಿಕೊಂಡಿದೆ.
ರೀಲ್ಸ್ ಹಿಂದಿನ ಅಸಲಿ ಕಾರಣವೇನು
ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಹೋಗಲು ಬಸ್ ಪ್ರಯಾಣ ದರ ಗಗನಕ್ಕೇರಿದೆ ಮತ್ತು ಬಸ್ ಗಳಲ್ಲಿ ಸೀಟು ಸಿಗುತ್ತಿಲ್ಲ ಎಂಬ ಸಂದೇಶವನ್ನು ಹಾಸ್ಯಮಯವಾಗಿ ಜನರಿಗೆ ತಲುಪಿಸಲು ಈ ರೀತಿ ಮಾಡಿದೆವು ಎಂದು ಯುವಕರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಪ್ರ್ಯಾಂಕ್ ವಿಡಿಯೋ ಮಾಡುವ ಭರದಲ್ಲಿ ವೃದ್ಧ ತಂದೆಯ ಪ್ರಾಣಕ್ಕೇ ಕುತ್ತು ತರುವಂತಹ ಕೆಲಸ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪೊಲೀಸರ ವಿಚಾರಣೆಯ ನಂತರ ತಪ್ಪಿನ ಅರಿವಾದ ಯುವತಿ ವಿಡಿಯೋ ಮೂಲಕ ಕ್ಷಮೆ ಕೋರಿದ್ದಾಳೆ. ನಾವು ಐದು ಜನ ಸೇರಿ ನಮ್ಮ ತಂದೆಯನ್ನು ಚೀಲದಲ್ಲಿ ಹಾಕಿ ಕೊರಿಯರ್ ಆಫೀಸ್ ಗೆ ಹೋಗಿದ್ದು ನಿಜ. ಹಬ್ಬದ ಸಮಯದಲ್ಲಿ ಬಸ್ ಟಿಕೆಟ್ ದರ ಏರಿಕೆ ಮತ್ತು ಸೀಟಿನ ಅಭಾವದ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರ್ಯಾಂಕ್ ಮಾಡಿದ್ದೆವು. ಆದರೆ ಇದು ಇಷ್ಟೊಂದು ದೊಡ್ಡ ತಪ್ಪಾಗುತ್ತದೆ ಎಂದು ಭಾವಿಸಿರಲಿಲ್ಲ. ದಯವಿಟ್ಟು ಯಾರೂ ಈ ರೀತಿಯ ಸಾಹಸಕ್ಕೆ ಕೈಹಾಕಬೇಡಿ. ನಮ್ಮಿಂದ ಇನ್ನೊಮ್ಮೆ ಇಂತಹ ತಪ್ಪಾಗುವುದಿಲ್ಲ, ನಮ್ಮನ್ನು ಕ್ಷಮಿಸಿ ಎಂದು ಯುವತಿ ಅಂಗಲಾಚಿದ್ದಾಳೆ.
ಪೊಲೀಸರು ಈ ಯುವಕರ ತಂಡದಿಂದ ಮುಂಜಾಗ್ರತಾ ಕ್ರಮವಾಗಿ ಕ್ಷಮಾಪಣಾ ಪತ್ರ ಬರೆಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಲೈಕ್ಸ್ ಮೋಹಕ್ಕೆ ಬಿದ್ದು ಸಂಬಂಧಗಳನ್ನೇ ಪಣಕ್ಕಿಡುವ ಇಂತಹ ವಿಕೃತಿಗಳು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವುದಂತೂ ಸುಳ್ಳಲ್ಲ.








