ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರುಗಳೆಂದರೆ ಅದು ಈಶ್ವರಿಯ ರವಿಚಂದ್ರನ್ ಮತ್ತು ನಾದಬ್ರಹ್ಮ ಹಂಸಲೇಖ. ಪ್ರೇಮಲೋಕದ ಮೂಲಕ ಕನ್ನಡಿಗರ ಎದೆಯಲ್ಲಿ ಪ್ರೇಮದ ಪರಾಕಾಷ್ಠೆಯನ್ನು ಬಿತ್ತಿದ ಈ ಜೋಡಿ, ರಣಧೀರನ ಮೂಲಕ ಪೌರುಷದ ಕಹಳೆ ಊದಿತ್ತು. ಇದೀಗ ದಶಕಗಳ ನಂತರ ಈ ಇಬ್ಬರು ದಿಗ್ಗಜರು ಒಂದೇ ವೇದಿಕೆಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಹೌದು, ಅಭಿಮಾನಿಗಳ ಪಾಲಿನ ಹಬ್ಬವಾಗಿರುವ ಕ್ರೇಜಿ ಬ್ರಹ್ಮ ಎನ್ನುವ ಮೆಗಾ ಇವೆಂಟ್ ನ ಲಾಂಛನ ಅನಾವರಣಗೊಳ್ಳುವ ಮೂಲಕ ಈ ಐತಿಹಾಸಿಕ ಕ್ಷಣಕ್ಕೆ ನಾಂದಿ ಹಾಡಲಾಗಿದೆ.
ನಗರದ ನಾಗರಭಾವಿಯ ಕಿಂಗ್ಸ್ ಕ್ಲಬ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ, ಈ ವಿಶೇಷ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಪ್ರಸ್ತುತ್ ಇನ್ನೋವೇಟಿವ್ ಕ್ರಿಯೇಷನ್ ಅಂಡ್ ಸೆಲ್ಯೂಷನ್ಸ್ ಸಂಸ್ಥೆಯ ರೂವಾರಿ ನ. ವಿನಯ್ ಅವರು, ಮೇ 30 ರಂದು ಅಂದರೆ ಕ್ರೇಜಿಸ್ಟಾರ್ ಹುಟ್ಟುಹಬ್ಬದಂದೇ ಜೆಕೆ ಗ್ರಾಂಡ್ ಅರೇನಾದಲ್ಲಿ ಈ ಮಹಾಸಂಗಮ ನಡೆಯಲಿದೆ ಎಂದು ಘೋಷಿಸಿದರು. ರವಿ ಮಾಮ ಮತ್ತು ಹಂಸಲೇಖ ಸರ್ ಅವರ 40 ವರ್ಷಗಳ ಸುದೀರ್ಘ ಸಿನಿ ಪಯಣಕ್ಕೆ ಗೌರವ ಸಲ್ಲಿಸುವ ಸಲುವಾಗಿ, ಇಡೀ ಚಿತ್ರರಂಗವೇ ನಿಬ್ಬೆರಗಾಗುವಂತಹ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ತಮ್ಮದೇ ಶೈಲಿಯಲ್ಲಿ ಗರ್ಜಿಸಿದ ಕನಸುಗಾರ ರವಿಚಂದ್ರನ್, ಹಂಸಲೇಖ ಮತ್ತು ನಾನು ಬದುಕಿದ್ದೇ ಸಿನಿಮಾಕ್ಕಾಗಿ, ನಮ್ಮ ಉಸಿರೇ ಸಿನಿಮಾ. ನಮ್ಮಿಬ್ಬರ ನಡುವೆ ಜಗಳವಿತ್ತು ಎಂದು ಜನ ಅಂದುಕೊಂಡಿದ್ದಾರೆ, ಆದರೆ ಸತ್ಯವೇನೆಂದರೆ ನಮ್ಮಲ್ಲಿ ಇದ್ದದ್ದು ಕೇವಲ ಸೃಜನಶೀಲ ಭಿನ್ನಾಭಿಪ್ರಾಯಗಳು ಮಾತ್ರ. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ನನಗೆ ಸವಾಲಾಗಿರುತ್ತಿತ್ತು, ಅದನ್ನು ಮೀರಿಸುವಂತೆ ನಾನು ದೃಶ್ಯಗಳನ್ನು ಕಟ್ಟಿಕೊಡುತ್ತಿದ್ದೆ. ಆ ಆರೋಗ್ಯಕರ ಪೈಪೋಟಿಯೇ ಇವತ್ತು ಇತಿಹಾಸ ನಿರ್ಮಿಸಿದೆ. ಜಗತ್ತಿಗೆ ಬೇಕಿರುವುದು ಪ್ರೀತಿ ಮಾತ್ರ, ಯುದ್ಧ ನಿಲ್ಲಿಸಲು ಇರಾನ್ ನಲ್ಲಿಯೂ ಇಂತಹ ಪ್ರೇಮದ ಕಾರ್ಯಕ್ರಮ ನಡೆಯಬೇಕು ಎಂದು ತಮ್ಮ ತತ್ವಚಿಂತನೆಯನ್ನು ಹರಿಬಿಟ್ಟರು.

ರವಿಚಂದ್ರನ್ ನನಗೆ ಅನ್ನದಾತರು: ಭಾವುಕರಾದ ಹಂಸಲೇಖ
ಇದೇ ವೇಳೆ ಮಾತನಾಡಿದ ನಾದಬ್ರಹ್ಮ ಹಂಸಲೇಖ, ಹಳೆಯ ದಿನಗಳನ್ನು ನೆನೆದು ಭಾವುಕರಾದರು. ವೀರಸ್ವಾಮಿ ಮತ್ತು ರವಿಚಂದ್ರನ್ ಕುಟುಂಬ ನನಗೆ ಅನ್ನ ಹಾಕಿದ ಪ್ರಭುಗಳು. ನಾನು ಇಂದು ಹಂಸಲೇಖ ಆಗಿ ನಿಂತಿದ್ದರೆ ಅದಕ್ಕೆ ಇವರೇ ಕಾರಣ. ನಾವಿಬ್ಬರೂ ಜೊತೆಗಿದ್ದರೆ ಕನ್ನಡದ ಜನ ನಮ್ಮನ್ನು ಅತಿಯಾಗಿ ಪ್ರೀತಿಸುತ್ತಾರೆ. ವಿನಯ್ ಅವರ ಈ ಸಾಹಸಕ್ಕೆ ನಮ್ಮ ಬೆಂಬಲವಿದೆ. ಸಮಾಜದ ಸ್ವಾಸ್ಥ್ಯಕ್ಕೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಗತ್ಯ ಎಂದು ನುಡಿದರು.
ಒಟ್ಟಿನಲ್ಲಿ ಪ್ರೇಮಿಗಳ ದಿನದಂದು ನಡೆಯಬೇಕಿದ್ದ ಕಾರ್ಯಕ್ರಮ, ಈಗ ಪ್ರೀತಿಯ ಸರದಾರನ ಹುಟ್ಟುಹಬ್ಬದಂದೇ ನಡೆಯುತ್ತಿರುವುದು ವಿಶೇಷ. ಪತ್ರಿಕಾಗೋಷ್ಠಿಯಲ್ಲಿ ರವಿ-ಹಂಸ ಜೋಡಿಯ ಸಾಧನೆಯನ್ನು ಸಾರುವ ಕಿರು ಸಾಕ್ಷ್ಯಚಿತ್ರ ಪ್ರದರ್ಶನ ಕೂಡ ನೆರೆದವರ ಕಣ್ಮನ ಸೆಳೆಯಿತು. ಮೇ 30 ರಂದು ನಡೆಯಲಿರುವ ಈ ಕ್ರೇಜಿ ಬ್ರಹ್ಮ ಸಮಾಗಮಕ್ಕಾಗಿ ಇಡೀ ಗಂಧದಗುಡಿಯೇ ಕಾಯುತ್ತಿದೆ ಎಂದರೆ ತಪ್ಪಾಗಲಾರದು.







