ಸೂರತ್ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಅಮಿತ್ ತಿವಾರಿ ಅವರು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಭಿಜೀತ್ ದೀಪ್ಕೆ ಅವರ ಅಮೆರಿಕದ ಶಿಕ್ಷಣಕ್ಕೆ ಹಣಕಾಸು ಹೇಗೆ ಒದಗಿಸಲಾಯಿತು ಮತ್ತು ಅವರ ಕುಟುಂಬದ ಆದಾಯದ ಮೂಲವೇನು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಭಾರತದ ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿರುವ ಅಮಿತ್ ತಿವಾರಿ, ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಸಿಜೆಪಿ ಪ್ರತಿಭಟನಾಕಾರರ ಕಾನೂನು ಹೋರಾಟಕ್ಕಾಗಿ ಘೋಷಿಸಿರುವ 1 ಕೋಟಿ ರೂಪಾಯಿಗಳ ನಿಧಿಯ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ. ಈ ದೊಡ್ಡ ಮೊತ್ತದ ಹಣದ ವರ್ಗಾವಣೆ ಮತ್ತು ಅದರ ಬಳಕೆಯ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸಬೇಕು ಎಂದು ಅವರು ವಿನಂತಿಸಿದ್ದಾರೆ.
ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನರಾವ್ ದೀಪ್ಕೆ ಅವರು ಮಹಾರಾಷ್ಟ್ರ ಸರ್ಕಾರದ ನಿವೃತ್ತ ನೌಕರರಾಗಿದ್ದಾರೆ. ಒಬ್ಬ ಸಾಮಾನ್ಯ ನಿವೃತ್ತ ನೌಕರನ ಆದಾಯದಲ್ಲಿ ಮಗನನ್ನು ವಿದೇಶಕ್ಕೆ ಕಳುಹಿಸಿ ಓದಿಸಲು ಸಾಧ್ಯವೇ ಎಂಬುದು ತಿವಾರಿ ಅವರ ಮುಖ್ಯ ಪ್ರಶ್ನೆಯಾಗಿದೆ. ಮಗನ ವಿದೇಶಿ ಶಿಕ್ಷಣಕ್ಕೆ ವ್ಯಯಿಸಲಾದ ಹಣದ ಮೂಲವನ್ನು ಪತ್ತೆಹಚ್ಚಲು ಅವರ ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದಲ್ಲದೆ ಕಾಕ್ರೋಚ್ ಜನತಾ ಪಾರ್ಟಿಯ ಕಾನೂನುಬದ್ಧ ಅಸ್ತಿತ್ವದ ಬಗ್ಗೆಯೂ ತಿವಾರಿ ಪ್ರಶ್ನೆ ಎತ್ತಿದ್ದಾರೆ. ಸಿಜೆಪಿ ಎಂಬುದು ಚುನಾವಣಾ ಆಯೋಗದಲ್ಲಿ ನೋಂದಾಯಿತವಾಗಿರುವ ರಾಜಕೀಯ ಪಕ್ಷವೇ ಎಂಬ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ. ಜನಪ್ರತಿನಿಧಿತ್ವ ಕಾಯ್ದೆ 1951ರ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗದ ಸಂಸ್ಥೆಯು ರಾಜಕೀಯ ಪಕ್ಷದ ಹೆಸರಿನಲ್ಲಿ ಕಾರ್ಯನಿರ್ವಹಿಸುವುದು ಮತ್ತು ದೇಣಿಗೆ ಅಥವಾ ನಿಧಿ ಸಂಗ್ರಹಿಸುವುದು ಕಾನೂನುಬಾಹಿರ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಪಿಲ್ ಸಿಬಲ್ ಅವರು ಘೋಷಿಸಿರುವ 1 ಕೋಟಿ ರೂಪಾಯಿಗಳ ನಿಧಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಅನ್ವಯವಾಗುತ್ತದೆಯೇ ಎಂಬ ಬಗ್ಗೆಯೂ ಅಮಿತ್ ತಿವಾರಿ ಅವರು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ ದೂರು ನೀಡಿದ್ದಾರೆ. ರಾಜಕೀಯ ಪಕ್ಷದ ಹೆಸರಿನಲ್ಲಿ ನಡೆಯುತ್ತಿರುವ ಈ ಆರ್ಥಿಕ ವ್ಯವಹಾರಗಳು ಪಾರದರ್ಶಕವಾಗಿಲ್ಲ ಎಂಬುದು ಅವರ ಆರೋಪವಾಗಿದೆ.
ಇತ್ತೀಚೆಗೆ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಪ್ರತಿಭಟನಾಕಾರರಿಗೆ ಸಹಾಯ ಮಾಡಲು ಸಿಜೆಪಿ ಈ ನಿಧಿಯನ್ನು ಸ್ಥಾಪಿಸಿತ್ತು. ಇದಕ್ಕೆ ಕಪಿಲ್ ಸಿಬಲ್ ಅವರು ಬೆಂಬಲ ಸೂಚಿಸಿ 1 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಈಗ ಈ ಇಡೀ ವ್ಯವಹಾರವು ತನಿಖಾ ಸಂಸ್ಥೆಗಳ ಮೆಟ್ಟಿಲೇರಿದ್ದು, ಮುಂಬರುವ ದಿನಗಳಲ್ಲಿ ಅಭಿಜೀತ್ ದೀಪ್ಕೆ ಮತ್ತು ಅವರ ಸಂಘಟನೆಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.






