ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ದಿನದಿಂದ ದಿನಕ್ಕೆ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ. ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್ ಗಳವರೆಗೆ ಎಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸಾಮಾನ್ಯವಾಗಿದೆ. ಆದರೆ ಈ ಡಿಜಿಟಲ್ ಕ್ರಾಂತಿಯ ಜೊತೆಗೆ ಆನ್ಲೈನ್ ವಂಚನೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು ಇಂದಿನಿಂದ ಸಾಕಷ್ಟು ಆರ್ಥಿಕ ವಿಚಾರಗಳಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ದೈನಂದಿನ ಆರ್ಥಿಕ ವಹಿವಾಟಿನ ಮೇಲೆ ನೇರ ಪರಿಣಾಮ ಬೀರಲಿದೆ.
ಆರ್ಬಿಐ ತರುತ್ತಿರುವ ಹೊಸ ದೃಢೀಕರಣ ನಿಯಮಗಳೇನು
ಇನ್ನು ಮುಂದೆ ಆನ್ಲೈನ್ ವಹಿವಾಟು ನಡೆಸುವಾಗ ಕೇವಲ ಒಟಿಪಿ ನಮೂದಿಸಿದರೆ ಹಣ ಪಾವತಿಯಾಗುವುದಿಲ್ಲ. ಆರ್ ಬಿ ಐ ಹೊಸ ನಿಯಮದ ಪ್ರಕಾರ ಇಂದಿನಿಂದ ಪ್ರತಿಯೊಂದು ಡಿಜಿಟಲ್ ಪಾವತಿಗೆ ಕಡ್ಡಾಯವಾಗಿ ಎರಡು ಹಂತದ ದೃಢೀಕರಣ ಇರಲೇಬೇಕು. ಅಂದರೆ ಒಟಿಪಿ ಜೊತೆಗೆ ನಿಮ್ಮ ಬೆರಳಚ್ಚು ಅಥವಾ ಮುಖದ ಗುರುತು ಅಥವಾ ರಹಸ್ಯ ಪಿನ್ ನಂಬರ್ ಬಳಸಬೇಕಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳುವ ಮುನ್ನ ಎರಡು ಬಲವಾದ ಭದ್ರತಾ ಬಾಗಿಲುಗಳನ್ನು ದಾಟಬೇಕಾಗುತ್ತದೆ.
ಕೇವಲ ಒಟಿಪಿ ವ್ಯವಸ್ಥೆ ರದ್ದು ಮಾಡಲು ಕಾರಣವೇನು
ಹಿಂದೆಲ್ಲಾ ಬ್ಯಾಂಕ್ ವ್ಯವಹಾರಗಳಿಗೆ ಒಟಿಪಿ ಬಂದರೆ ಸಾಕು ಎಂಬ ನಂಬಿಕೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಸಿಮ್ ಸ್ವಾಪಿಂಗ್ ಮತ್ತು ಫಿಶಿಂಗ್ ಲಿಂಕ್ ಗಳ ಮೂಲಕ ಗ್ರಾಹಕರ ಮೊಬೈಲ್ ಗೆ ಬರುವ ಒಟಿಪಿಯನ್ನು ಸುಲಭವಾಗಿ ಕದಿಯುತ್ತಿದ್ದಾರೆ. ಕೇವಲ ಒಂದು ಒಟಿಪಿ ಲೀಕ್ ಆದರೆ ಇಡೀ ಬ್ಯಾಂಕ್ ಖಾತೆಯನ್ನೇ ಖಾಲಿ ಮಾಡುವ ಹ್ಯಾಕರ್ ಗಳಿದ್ದಾರೆ. ಈ ಅಪಾಯವನ್ನು ಶಾಶ್ವತವಾಗಿ ತಡೆಯಲು ಮತ್ತು ಅನಧಿಕೃತ ವ್ಯಕ್ತಿಗಳು ನಿಮ್ಮ ಖಾತೆಗೆ ಕನ್ನ ಹಾಕುವುದನ್ನು ತಪ್ಪಿಸಲು ಆರ್ ಬಿ ಐ ಈ ಕಟ್ಟುನಿಟ್ಟಿನ ಹೆಜ್ಜೆ ಇಟ್ಟಿದೆ.
ದೈನಂದಿನ ಯುಪಿಐ ವಹಿವಾಟಿನ ಮೇಲೆ ಇದರ ಪ್ರಭಾವ ಹೇಗಿರಲಿದೆ
ಇಂದಿನಿಂದ ಈ ಹೊಸ ಭದ್ರತಾ ವ್ಯವಸ್ಥೆ ಅನ್ವಯವಾಗಲಿದ್ದು ಹಣ ಪಾವತಿ ಪ್ರಕ್ರಿಯೆ ತೆಗೆದುಕೊಳ್ಳುವ ಸಮಯದಲ್ಲಿ ಸ್ವಲ್ಪ ಏರಿಕೆಯಾಗಬಹುದು. ಆದರೆ ನೀವು ಪ್ರತಿದಿನ ಬಳಸುವ ನಿಮ್ಮ ಸ್ವಂತ ಮೊಬೈಲ್ ನಲ್ಲಿ ವಹಿವಾಟು ನಡೆಸುವಾಗ ಇದು ಅಷ್ಟೇನೂ ಕಷ್ಟ ಅನ್ನಿಸುವುದಿಲ್ಲ. ಒಂದು ವೇಳೆ ಬೇರೆ ಹೊಸ ಸಾಧನದಿಂದ ಲಾಗಿನ್ ಆಗಿ ಹಣ ಕಳುಹಿಸುವಾಗ ಅಥವಾ ಎಂದಿಗಿಂತ ಅತಿ ದೊಡ್ಡ ಮೊತ್ತದ ಹಣವನ್ನು ವರ್ಗಾವಣೆ ಮಾಡುವಾಗ ಬ್ಯಾಂಕ್ ವ್ಯವಸ್ಥೆ ಹೆಚ್ಚಿನ ಭದ್ರತಾ ಪ್ರಶ್ನೆಗಳನ್ನು ಅಥವಾ ಪರಿಶೀಲನೆಯನ್ನು ಕಡ್ಡಾಯವಾಗಿ ಕೇಳುತ್ತದೆ.
ಗ್ರಾಹಕರಿಗೆ ಸಿಹಿಸುದ್ದಿ ವಂಚನೆ ನಡೆದರೆ ಬ್ಯಾಂಕುಗಳೇ ನೇರ ಹೊಣೆ
ಈ ಹೊಸ ನಿಯಮದ ಅಡಿಯಲ್ಲಿ ಗ್ರಾಹಕರಿಗೆ ಸಿಗುವ ಅತಿದೊಡ್ಡ ರಿಲೀಫ್ ಎಂದರೆ ಬ್ಯಾಂಕುಗಳ ಜವಾಬ್ದಾರಿ ಹೆಚ್ಚಾಗಿರುವುದು. ಬ್ಯಾಂಕ್ ಅಥವಾ ಪಾವತಿ ಆಪ್ ಗಳ ಸರ್ವರ್ ಸಮಸ್ಯೆಯಿಂದ ಅಥವಾ ತಾಂತ್ರಿಕ ಭದ್ರತಾ ಲೋಪದಿಂದ ಗ್ರಾಹಕರು ಹಣ ಕಳೆದುಕೊಂಡರೆ ಅದಕ್ಕೆ ನೇರವಾಗಿ ಬ್ಯಾಂಕುಗಳೇ ಹೊಣೆಯಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಗ್ರಾಹಕರು ಕಳೆದುಕೊಂಡ ಹಣವನ್ನು ಬ್ಯಾಂಕುಗಳು ಶೀಘ್ರವಾಗಿ ಮರುಪಾವತಿ ಮಾಡಬೇಕಾಗುತ್ತದೆ. ಇದು ಆರ್ಥಿಕ ಸಂಸ್ಥೆಗಳು ತಮ್ಮ ಭದ್ರತಾ ವ್ಯವಸ್ಥೆಯನ್ನು ಸದಾ ಎಚ್ಚರದಿಂದ ಕಾಯ್ದುಕೊಳ್ಳುವಂತೆ ಮಾಡುತ್ತದೆ.
ಆರ್ ಬಿ ಐ ನ ಈ ದಿಟ್ಟ ಹೆಜ್ಜೆಯ ಹಿಂದಿನ ಪ್ರಮುಖ ಉದ್ದೇಶ
ಭಾರತವನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಸುರಕ್ಷಿತ ಡಿಜಿಟಲ್ ಆರ್ಥಿಕತೆಯನ್ನಾಗಿ ಮಾಡುವುದು ಆರ್ ಬಿ ಐ ನ ಪ್ರಮುಖ ಗುರಿಯಾಗಿದೆ. ಆನ್ಲೈನ್ ವಂಚನೆಗಳಿಗೆ ಬ್ರೇಕ್ ಹಾಕುವುದು ಡಿಜಿಟಲ್ ವಹಿವಾಟಿನ ಮೇಲೆ ಜನಸಾಮಾನ್ಯರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದು ಮತ್ತು ಯುಪಿಐ ಹಾಗೂ ಕಾರ್ಡ್ ಪಾವತಿಗಳನ್ನು ನೂರಕ್ಕೆ ನೂರು ಪಾಲು ಸುರಕ್ಷಿತವಾಗಿಸುವುದು ಈ ಹೊಸ ನಿಯಮಗಳ ಹಿಂದಿನ ಅಸಲಿ ಉದ್ದೇಶವಾಗಿದೆ.
ಈ ಪ್ರಕ್ರಿಯೆ ಗ್ರಾಹಕರಿಗೆ ಸ್ವಲ್ಪ ದೀರ್ಘ ಎನಿಸಿದರೂ ಪ್ರತಿಯೊಬ್ಬರ ಕಷ್ಟದ ಹಣವನ್ನು ಸೈಬರ್ ಕಳ್ಳರಿಂದ ರಕ್ಷಿಸಲು ಇದೊಂದು ಅತ್ಯುತ್ತಮ ಮತ್ತು ಅನಿವಾರ್ಯ ಅಸ್ತ್ರವಾಗಿದೆ.







