ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ಭಾರೀ ಕುತೂಹಲ ಹುಟ್ಟಿಸಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅವರಿಗೆ ಪಕ್ಷದಲ್ಲಿ ಯಾವ ಸ್ಥಾನಮಾನ ಸಿಗಲಿದೆ ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.
ಹಿಂದುಳಿದ ವರ್ಗಗಳ ಪ್ರಭಾವಿ ನಾಯಕನಾಗಿರುವ ಸಿದ್ದರಾಮಯ್ಯ ಅವರ ಅನುಭವವನ್ನು ರಾಷ್ಟ್ರ ರಾಜಕಾರಣದಲ್ಲಿ ಬಳಸಿಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್ ಹೈಕಮಾಂಡ್‌ನಲ್ಲಿದೆ ಎನ್ನಲಾಗುತ್ತಿದೆ. ಕೇಂದ್ರ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ಅಥವಾ ಸಂಘಟನಾ ಹುದ್ದೆ ನೀಡುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಮಾತುಕತೆಗಳು ಕೇಳಿಬರುತ್ತಿವೆ.
ಆದರೆ, ಸಿದ್ದರಾಮಯ್ಯ ಅವರು ರಾಷ್ಟ್ರೀಯ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದಲ್ಲೇ ಹೆಚ್ಚು ಸಕ್ರಿಯರಾಗಿರಲು ಇಷ್ಟಪಡುತ್ತಾರೆ ಎಂಬ ಮಾತುಗಳು ಅವರ ಆಪ್ತ ವಲಯದಿಂದಲೇ ಕೇಳಿಬರುತ್ತಿವೆ. ಹೀಗಾಗಿ ಅವರು ಮುಂದೇನು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳಿಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡುವ ಸಾಧ್ಯತೆ ಇದ್ದು, ರಾಜ್ಯ ರಾಜಕೀಯದ ಮುಂದಿನ ದಿಕ್ಕು ಅದರಿಂದ ನಿರ್ಧಾರವಾಗುವ ನಿರೀಕ್ಷೆಯಿದೆ.








