ಬೆಂಗಳೂರು: ಜಾಗತಿಕ ಯುದ್ಧಗಳ ನೆಪ ಹೇಳಿಕೊಂಡು ದೇಶದಲ್ಲಿ ಮಿತಿಮೀರುತ್ತಿರುವ ಬೆಲೆ ಏರಿಕೆಯನ್ನು ಮರೆಮಾಚುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದೋಷಪೂರಿತ ನೀತಿ ಹಾಗೂ ಆರ್ಥಿಕ ವೈಫಲ್ಯಗಳಿಂದಾಗಿ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಸಂಪೂರ್ಣವಾಗಿ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಬಹುಚರ್ಚಿತ ಪ್ರಧಾನಮಂತ್ರಿ ಉಜ್ವಲ ಯೋಜನೆಯು ವಾಸ್ತವದಲ್ಲಿ ವಿಫಲವಾಗಿದೆ ಎಂದು ಟೀಕಿಸಿದ ಅವರು, ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿರುವುದರಿಂದ ಮತ್ತು ಸಮರ್ಪಕ ಪೂರೈಕೆ ಇಲ್ಲದಿರುವುದರಿಂದ ಗ್ರಾಮೀಣ ಜನರು ಅನಿವಾರ್ಯವಾಗಿ ಮತ್ತೆ ಸೌದೆ ಒಲೆಗಳ ಮೊರೆ ಹೋಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಸೌದೆ ಸಿಗದಿರುವುದರಿಂದ ಜನರು ವಿದ್ಯುತ್ ಒಲೆಗಳನ್ನು ಬಳಸಲು ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಶೇಕಡಾ ಹತ್ತರಷ್ಟು ದಿಢೀರ್ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಗ್ಯಾಸ್ ದರ ಕೆಜಿಗೆ ಅರವತ್ತರಿಂದ ನೂರ ಹದಿನೈದು ರೂಪಾಯಿವರೆಗೆ ಏರಿಕೆಯಾಗಿದ್ದು, ಹೋಟೆಲ್ ಉದ್ಯಮ ಹಾಗೂ ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡುಗೆ ಅನಿಲ ನೀಡಬೇಕಾದ ಕೇಂದ್ರ ಸರ್ಕಾರವು ಇಂದು ದೇಶದ ಜನರಿಗೆ ಅಕ್ಷರಶಃ ಸೌದೆ ಭಾಗ್ಯ ಕರುಣಿಸಿದೆ ಎಂದು ಅವರು ವ್ಯಂಗ್ಯವಾಡಿದರು.
ಏಪ್ರಿಲ್ ಒಂದನೇ ತಾರೀಖಿನಿಂದ ದೇಶದ ಜನರಿಗೆ ಆರ್ಥಿಕ ಪರಿಹಾರ ನೀಡುವ ಬದಲು, ಬೆಲೆ ಏರಿಕೆಯ ಬರೆ ಎಳೆಯುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಏಪ್ರಿಲ್ ಫೂಲ್ ಮಾಡಿದೆ ಎಂದು ಡಿ ಕೆ ಶಿವಕುಮಾರ್ ಕಿಡಿಕಾರಿದರು. ರೈಲು ಪ್ರಯಾಣ ದರ ಹಾಗೂ ಹೆದ್ದಾರಿ ಟೋಲ್ ಶುಲ್ಕವನ್ನು ದಿಢೀರನೆ ಹೆಚ್ಚಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಮೊದಲೇ ಕಂಗೆಟ್ಟಿರುವ ಜನರಿಗೆ ಇದೀಗ ಒಂಬೈನೂರಕ್ಕೂ ಹೆಚ್ಚು ಅತ್ಯಗತ್ಯ ಜೀವ ರಕ್ಷಕ ಔಷಧಿಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ಹದಗೆಡಿಸಿದೆ. ಇದು ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ಸಾರಿದ ಬೆಲೆ ಏರಿಕೆಯ ಯುದ್ಧವಾಗಿದೆ ಎಂದು ಅವರು ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಅಚ್ಛೇ ದಿನಗಳನ್ನು ತರುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆಗಳು ಈಗ ಎಲ್ಲಿ ಹೋದವು ಎಂದು ಪ್ರಶ್ನಿಸಿದ ಅವರು, ಈಗ ಜನರಿಗೆ ಅಚ್ಛೇ ದಿನಗಳ ಬದಲು ಕಚ್ಚಾ ದಿನಗಳು ಎದುರಾಗಿವೆ ಎಂದು ಲೇವಡಿ ಮಾಡಿದರು. ಇಂತಹ ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ಗಗನಕ್ಕೇರುತ್ತಿರುವ ಬೆಲೆ ಏರಿಕೆಯ ಕಷ್ಟದ ದಿನಗಳಲ್ಲಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಮಾತ್ರ ನಾಡಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆಯಿಂದ ಮುಕ್ತಗೊಳಿಸಿ ನಿಜವಾದ ಆಸರೆಯಾಗಿ ಕೆಲಸ ಮಾಡುತ್ತಿವೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.







