ಮನ ಕಲುಕುವ ಘಟನೆ ಬೆಂಗಳೂರು ನಗರದಲ್ಲಿ ಸಂಭವಿಸಿದೆ. ಬಕೆಟ್‌ನಲ್ಲಿದ್ದ ನೀರಿನಲ್ಲಿ ಮುಳುಗಿ 11 ತಿಂಗಳ ಮಗು ಸಾವನ್ನಪ್ಪಿದ ದುರ್ಘಟನೆ ನಡೆದಿದ್ದು, ಈ ದುಃಖವನ್ನು ಸಹಿಸಲಾರದೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಮೃತರನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಮತ್ತು ಅವರ ಮಗು ಅಗಸ್ಯ (11 ತಿಂಗಳು) ಎಂದು ಗುರುತಿಸಲಾಗಿದೆ.
ಪ್ರತಿಭಾ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದು, ಟೆರೇಸ್ ಮೇಲೆ ಒಣಹಾಕಿದ್ದ ಬಟ್ಟೆಗಳನ್ನು ತರಲು ಹೋದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮಗು ಬಕೆಟ್‌ನಲ್ಲಿದ್ದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಆ ದೃಶ್ಯವನ್ನು ಕಂಡ ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ಕುಟುಂಬ ಮತ್ತು ಸುತ್ತಮುತ್ತಲಿನವರನ್ನು ಆಘಾತಕ್ಕೀಡಾಗಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








