ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ತೀವ್ರ ಮುಖಭಂಗವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಉದ್ವಿಗ್ನತೆಯ ನಡುವೆ ಶಾಂತಿ ದಲ್ಲಾಳಿಯಂತೆ ವರ್ತಿಸಲು ಮುಂದಾದ ಪಾಕಿಸ್ತಾನಕ್ಕೆ ಪಶ್ಚಿಮ ಏಷ್ಯಾದ ಪ್ರಬಲ ರಾಷ್ಟ್ರ ಕತಾರ್ ಸರಿಯಾದ ಪೆಟ್ಟು ನೀಡಿದೆ. ಒಂದೆಡೆ ಪಾಕಿಸ್ತಾನಿಗಳಿಗೆ ತನ್ನ ದೇಶದ ಬಾಗಿಲನ್ನು ಕತಾರ್ ಮುಚ್ಚುತ್ತಿದ್ದರೆ, ಮತ್ತೊಂದೆಡೆ ಅದೇ ಕತಾರ್ ಭಾರತೀಯರಿಗೆ ಕೆಂಪು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವುದು ಭಾರತದ ಬಲಿಷ್ಠ ವಿದೇಶಾಂಗ ನೀತಿಗೆ ಹಿಡಿದ ಕನ್ನಡಿಯಾಗಿದೆ.
ಪಾಕಿಸ್ತಾನದ ದಲ್ಲಾಳಿ ಕೆಲಸಕ್ಕೆ ತಕ್ಕ ಶಾಸ್ತಿ
ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಒಂದೆಡೆ ಇರಾನ್ ಜೊತೆಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವ ನಾಟಕವಾಡುತ್ತಲೇ, ಮತ್ತೊಂದೆಡೆ ಅಮೆರಿಕದ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದೆ. ಈ ಸಂಘರ್ಷದಲ್ಲಿ ಸೌದಿ ಅರೇಬಿಯಾದ ಪಾಲ್ಗೊಳ್ಳುವಿಕೆಯು ಪಾಕಿಸ್ತಾನದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಈ ಎಲ್ಲಾ ಗೊಂದಲಗಳ ನಡುವೆ ತನ್ನನ್ನು ತಾನು ಜಾಗತಿಕ ಶಾಂತಿ ದಲ್ಲಾಳಿ ಎಂದು ಬಿಂಬಿಸಿಕೊಳ್ಳಲು ಪಾಕಿಸ್ತಾನ ಮಾಡಿದ ಕುತಂತ್ರಗಳು ಸಂಪೂರ್ಣವಾಗಿ ವಿಫಲವಾಗಿವೆ. ತನ್ನ ಯೋಗ್ಯತೆಗೆ ಮೀರಿದ ಕೆಲಸಕ್ಕೆ ಕೈಹಾಕಿದ ಪಾಕಿಸ್ತಾನಕ್ಕೆ ಈಗ ತಕ್ಕ ಪ್ರತಿಫಲ ದೊರೆತಿದೆ.
ಪಾಕಿಸ್ತಾನಿಗಳಿಗೆ ವೀಸಾ ಆನ್ ಅರೈವಲ್ ರದ್ದು ಮಾಡಿದ ಕತಾರ್
ಪಾಕಿಸ್ತಾನದ ಈ ದ್ವಂದ್ವ ನಿಲುವಿಗೆ ಕತಾರ್ ಸರ್ಕಾರ ತಕ್ಕ ಶಾಸ್ತಿ ಮಾಡಿದೆ. ಕತಾರ್ ಸರ್ಕಾರವು ಪಾಕಿಸ್ತಾನಿ ನಾಗರಿಕರಿಗೆ ನೀಡುತ್ತಿದ್ದ ವೀಸಾ ಆನ್ ಅರೈವಲ್ ಸೌಲಭ್ಯವನ್ನು ದಿಢೀರನೆ ಸ್ಥಗಿತಗೊಳಿಸಿದೆ. ಕತಾರ್ ಸರ್ಕಾರದ ಈ ಕಠಿಣ ನಿರ್ಧಾರದಿಂದಾಗಿ ಅಲ್ಲಿಗೆ ಪ್ರಯಾಣ ಬೆಳೆಸುವ ಪಾಕಿಸ್ತಾನಿಗಳು ಅಕ್ಷರಶಃ ಕಂಗಾಲಾಗಿದ್ದಾರೆ.
ಈ ಬೆನ್ನಲ್ಲೇ ಕತಾರ್‌ನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತುರ್ತು ಎಚ್ಚರಿಕೆ ರವಾನಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ವೀಸಾ ಆನ್ ಅರೈವಲ್ ಸೌಲಭ್ಯ ಲಭ್ಯವಿಲ್ಲ. ಹೀಗಾಗಿ ಕತಾರ್‌ಗೆ ಪ್ರಯಾಣ ಬೆಳೆಸುವ ಮುನ್ನವೇ ಸೂಕ್ತ ವೀಸಾ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಪೂರ್ವಾನುಮತಿ ಅಥವಾ ವೀಸಾ ಇಲ್ಲದೆ ಬರುವ ಪ್ರಯಾಣಿಕರನ್ನು ವಲಸೆ ಕೌಂಟರ್‌ನಲ್ಲಿಯೇ ತಡೆದು ದೇಶದ ಪ್ರವೇಶವನ್ನು ನಿರಾಕರಿಸಲಾಗುತ್ತದೆ ಎಂದು ಪಾಕಿಸ್ತಾನಿ ರಾಯಭಾರ ಕಚೇರಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ ತಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ಕತಾರ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪಾಕಿಸ್ತಾನಿಗಳಿಗೆ ಸೂಚಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ರಾರಾಜಿಸಿದ ಭಾರತದ ಖದರ್
ಪಾಕಿಸ್ತಾನದ ಪರಿಸ್ಥಿತಿ ಇಷ್ಟು ಶೋಚನೀಯವಾಗಿದ್ದರೆ, ಭಾರತಕ್ಕೆ ಮಾತ್ರ ಕತಾರ್‌ನಲ್ಲಿ ವಿಶಿಷ್ಟವಾದ ಗೌರವ ಸಿಗುತ್ತಿದೆ. ಯುದ್ಧದ ಭೀತಿಯ ನಡುವೆಯೂ ಭಾರತ ಮತ್ತು ಕತಾರ್ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಪಾಕಿಸ್ತಾನಿಗಳಿಗೆ ವೀಸಾ ಸೌಲಭ್ಯ ಕಸಿದುಕೊಂಡಿರುವ ಕತಾರ್, ಭಾರತೀಯ ನಾಗರಿಕರಿಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿದೆ.
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಕತಾರ್ ಈಗಲೂ ಮೂವತ್ತು ದಿನಗಳ ಉಚಿತ ವೀಸಾ ಆನ್ ಅರೈವಲ್ ಸೌಲಭ್ಯವನ್ನು ನೀಡುತ್ತಿದೆ. ಕನಿಷ್ಠ ಆರು ತಿಂಗಳ ಮಾನ್ಯತೆ ಇರುವ ಪಾಸ್‌ಪೋರ್ಟ್, ದೃಢೀಕೃತ ರಿಟರ್ನ್ ಟಿಕೆಟ್, ಆರೋಗ್ಯ ವಿಮೆ ಹಾಗೂ ಹೋಟೆಲ್ ಬುಕಿಂಗ್ ದಾಖಲೆಗಳಿದ್ದರೆ ಭಾರತೀಯರು ಅತ್ಯಂತ ಸುಲಭವಾಗಿ ಕತಾರ್ ಪ್ರವೇಶಿಸಬಹುದಾಗಿದೆ.
ಯುದ್ಧದ ಉದ್ವಿಗ್ನತೆಯ ನಡುವೆಯೂ ಭಾರತೀಯರಿಗೆ ನೀಡಲಾಗುತ್ತಿರುವ ಈ ಸೌಲಭ್ಯವನ್ನು ಕತಾರ್ ಒಂದು ದಿನವೂ ಸ್ಥಗಿತಗೊಳಿಸಿಲ್ಲ ಎಂಬುದು ಗಮನಾರ್ಹ. ಅಷ್ಟೇ ಅಲ್ಲದೆ, ಅವಧಿ ಮುಗಿಯುತ್ತಿರುವ ಎಲ್ಲಾ ಪ್ರವೇಶ ವೀಸಾಗಳನ್ನು ಕತಾರ್ ಸರ್ಕಾರ ಸ್ವಯಂಚಾಲಿತವಾಗಿ ಮೂವತ್ತು ದಿನಗಳವರೆಗೆ ವಿಸ್ತರಿಸಿದೆ. ಇದು ಈಗಾಗಲೇ ಕತಾರ್‌ನಲ್ಲಿರುವ ಭಾರತೀಯರಿಗೆ ದೊಡ್ಡ ರಿಲೀಫ್ ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಯೋತ್ಪಾದನೆ ಮತ್ತು ದ್ವಂದ್ವ ನೀತಿಯಿಂದಾಗಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮೂಲೆಗುಂಪಾಗುತ್ತಿದ್ದರೆ, ತನ್ನ ಪ್ರಬಲ ನಾಯಕತ್ವ ಹಾಗೂ ಸ್ಪಷ್ಟ ವಿದೇಶಾಂಗ ನೀತಿಯಿಂದಾಗಿ ಭಾರತ ವಿಶ್ವದಾದ್ಯಂತ ರಾಜಮರ್ಯಾದೆ ಪಡೆಯುತ್ತಿದೆ ಎಂಬುದಕ್ಕೆ ಕತಾರ್‌ನ ಈ ನಿರ್ಧಾರವೇ ಸ್ಪಷ್ಟ ನಿದರ್ಶನವಾಗಿದೆ.








