ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮಾಸ್ಟರ್ ಸ್ಟ್ರಾಟಜಿಸ್ಟ್ ಎಂದೇ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ನೇರ ಸಮರ ಸಾರಿದ್ದಾರೆ. ಚುನಾವಣೆಗಳ ಹೊಸ್ತಿಲಲ್ಲಿ ವಿರೋಧ ಪಕ್ಷಗಳ ಎದೆಬಡಿತ ಹೆಚ್ಚಿಸುವ ಕಲೆ ಡಿಕೆಶಿಗೆ ಸಿದ್ಧಿಸಿದೆ. ಇದೀಗ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಪ್ರಧಾನಿಯವರ ಹೇಳಿಕೆಗಳನ್ನು ಗುರಿಯಾಗಿಸಿಕೊಂಡು ಅವರು ಪ್ರಯೋಗಿಸಿರುವ ಅಸ್ತ್ರ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಪ್ರಧಾನಿಯವರ ಹೇಳಿಕೆಗೆ ಡಿಕೆಶಿ ಗರಂ
ಕರ್ನಾಟಕದ ಪಂಚ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ತೀವ್ರವಾಗಿ ಖಂಡಿಸಿರುವ ಡಿಕೆ ಶಿವಕುಮಾರ್, ಪ್ರಧಾನಿಯವರ ಸ್ಥಾನದ ಘನತೆಯನ್ನು ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿಯವರು ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ಇಷ್ಟು ಕೀಳು ಮಟ್ಟದ ಸುಳ್ಳು ಹೇಳುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಹರಿಹಾಯ್ದಿದ್ದಾರೆ. ಇದುವರೆಗೆ ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ಉತ್ತರಿಸುತ್ತಿದ್ದ ಡಿಕೆಶಿ, ಈಗ ನೇರವಾಗಿ ಮೋದಿಯವರನ್ನೇ ಟಾರ್ಗೆಟ್ ಮಾಡುವ ಮೂಲಕ ತಮ್ಮ ರಾಜಕೀಯ ದಾಳವನ್ನು ಬಲಪಡಿಸಿದ್ದಾರೆ.
ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ
ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಕರ್ನಾಟಕ ದೇಶಕ್ಕೇ ಮಾದರಿ ಎಂದು ಬಣ್ಣಿಸಿದ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ವಚನಗಳನ್ನು ನೂರಕ್ಕೆ ನೂರು ಪಾಲನೆ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಆಸೆ ತೋರಿಸಿ ವಿಫಲವಾಗಿದೆ. ಇದೀಗ ಅದೇ ಕಥೆಯನ್ನು ಕೇರಳದಲ್ಲೂ ಮುಂದುವರಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯಾಗಲಿದೆ ಎಂಬರ್ಥದಲ್ಲಿ ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಇದೀಗ ಆ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿರುವ ಅವರು, ಬಿಜೆಪಿಯ ತಪ್ಪು ಮಾಹಿತಿ ಅಭಿಯಾನವನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಅಲ್ಲದೆ, ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಹಾಗೂ ಕೊರತೆಯ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಡಿಕೆಶಿ ಮಾಡುತ್ತಿದ್ದಾರೆ.
ಚುನಾವಣಾ ಅಸ್ತ್ರವಾಗಿ ಗ್ಯಾರಂಟಿ
ದಾವಣಗೆರೆ, ಬಾಗಲಕೋಟೆ ಸೇರಿದಂತೆ ಮುಂಬರುವ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಪಕ್ಷದ ಮುಖ್ಯ ಪ್ರಣಾಳಿಕೆ ಮತ್ತು ಅಸ್ತ್ರವಾಗಿದೆ. ವಿರೋಧ ಪಕ್ಷಗಳು ಈ ಯೋಜನೆಗಳನ್ನು ಟೀಕಿಸುತ್ತಿದ್ದರೆ, ಅದನ್ನು ಅಭಿವೃದ್ಧಿಯ ಸಂಕೇತ ಎಂದು ಬಿಂಬಿಸುವ ಮೂಲಕ ಜನರಿಗೆ ತಲುಪಿಸಲು ಡಿಕೆಶಿ ಕಸರತ್ತು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಪ್ರಧಾನಿ ಮೋದಿಯವರ ಮೇಲೆ ನೇರ ವಾಗ್ದಾಳಿ ನಡೆಸುವ ಮೂಲಕ ಡಿಕೆ ಶಿವಕುಮಾರ್ ಅವರು ರಾಜ್ಯ ರಾಜಕೀಯದಲ್ಲಿ ಮತ್ತೆ ತಮ್ಮ ಪ್ರಭಾವವನ್ನು ಸಾಬೀತುಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ.








