ಅಥಣಿ: ಲಕ್ಷ್ಮಣ ಸವದಿ ಬಿಜೆಪಿಗೆ ಮರಳಿ ಬರುವ ಪ್ರಶ್ನೆಯೇ ಇಲ್ಲ, ಒಂದು ವೇಳೆ ಅವರು ಪ್ರಯತ್ನಿಸಿದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಖಾರವಾಗಿ ನುಡಿದಿದ್ದಾರೆ. ಪಟ್ಟಣದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿರುವ ಸವದಿ ಅವರ ಬಿಜೆಪಿ ಮರು ಸೇರ್ಪಡೆ ಕುರಿತಾದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಸವದಿಯಿಂದ ಗೊಂದಲ ಸೃಷ್ಟಿ
ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದ ನಂತರ ನಮ್ಮ ನಾಯಕರ ವಿರುದ್ಧ ಮತ್ತು ಕ್ಷೇತ್ರದ ಜನರ ಬಗ್ಗೆ ಆಡಿರುವ ಮಾತುಗಳನ್ನು ಎಲ್‌ಇಡಿ ಸ್ಕ್ರೀನ್ ಮೂಲಕ ಜನರಿಗೆ ತೋರಿಸುತ್ತೇವೆ. ಅವರು ಬಿಜೆಪಿಗೆ ಬರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿ ಅಥಣಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇದು ಅವರ ಮತ್ತು ಬೆಂಬಲಿಗರ ತಂತ್ರಗಾರಿಕೆ ಅಷ್ಟೇ. ಕಾರ್ಯಕರ್ತರು ಇಂತಹ ಮಾತುಗಳಿಗೆ ಕಿವಿಗೊಡದೆ 2028ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ದೃಷ್ಟಿಯಿಂದ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಯತ್ನಾಳ ವಾಪಸಾತಿಗಾಗಿ ವೇದಿಕೆ ಸಿದ್ಧ
ಇದೇ ವೇಳೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರ ಬಗ್ಗೆ ಮಾತನಾಡಿದ ಜಾರಕಿಹೊಳಿ, ಯತ್ನಾಳ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನ ನನ್ನಿಂದ ನಡೆಯುತ್ತಿದೆ. ಈಗಾಗಲೇ ಅದಕ್ಕಾಗಿ ಒಂದು ವೇದಿಕೆ ಸಜ್ಜಾಗಿದೆ. ಬಾಗಲಕೋಟೆಯಲ್ಲಿ ನಮ್ಮ ಅಭ್ಯರ್ಥಿ ಪರ ಯತ್ನಾಳ ಪ್ರಚಾರ ಮಾಡಿದ್ದು, ಅವರ ಆಗಮನದಿಂದ ಹಿಂದುತ್ವ ಹಾಗೂ ಪಕ್ಷ ಬಲವರ್ಧನೆಯಾಗಲಿದೆ. ಯತ್ನಾಳ ಅವರು ಪಕ್ಷಕ್ಕೆ ಮರಳಿದರೆ ಅದು ನಮಗೆ ದೊಡ್ಡ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ
ದಾವಣಗೆರೆ ಮತ್ತು ಬಾಗಲಕೋಟೆಯ ಉಪಚುನಾವಣೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎರಡೂ ಕಡೆ ನಮ್ಮ ಪಕ್ಷದ ಕಾರ್ಯಕರ್ತರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಅಭ್ಯರ್ಥಿಗಳ ಗೆಲುವಿನ ಬಗ್ಗೆ ನಮಗೆ ಸಂಪೂರ್ಣ ಭರವಸೆಯಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.








