ತಮಿಳುನಾಡಿನ ರಾಜಕೀಯ ರಣಾಂಗಣದಲ್ಲಿ ಸಂಚಲನ ಮೂಡಿಸುತ್ತಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ನಟ ವಿಜಯ್ ಈಗ ತಮ್ಮ ವೈಯಕ್ತಿಕ ಜೀವನದ ಮೇಲಿನ ದಾಳಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ತಿರುನಲ್ವೇಲಿಯ ಕೆಟಿಸಿ ನಗರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ರಾಜಕೀಯ ವಿರೋಧಿಗಳಿಗೆ ನೇರ ಸವಾಲು ಹಾಕಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸಿದ್ದ ಸಾವಿರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ತಿರುನಲ್ವೇಲಿಯ ಜನರು ನನ್ನ ಹೃದಯದಲ್ಲಿದ್ದಾರೆ ಎಂದು ಭಾವುಕರಾಗಿ ನುಡಿದರು. ಇದೇ ವೇಳೆ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಡಿಎಂಕೆ ಪಕ್ಷವು ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಪಕ್ಷದ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಹೊರನೋಟಕ್ಕೆ ಡಿಎಂಕೆ ಮತ್ತು ಬಿಜೆಪಿ ಭಿನ್ನವಾಗಿ ಕಂಡರೂ, ತಮ್ಮನ್ನು ರಾಜಕೀಯವಾಗಿ ಮುಗಿಸಲು ಈ ಎರಡೂ ಪಕ್ಷಗಳು ಒಳಸಂಚು ರೂಪಿಸಿವೆ ಎಂದು ವಿಜಯ್ ಗಂಭೀರ ದೂರನ್ನು ನೀಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ನಿ ಸಂಗೀತಾ ಸೊರ್ನಲಿಂಗಂ ಅವರೊಂದಿಗಿನ ವಿಚ್ಛೇದನದ ವದಂತಿಗಳ ಬಗ್ಗೆ ವಿಜಯ್ ಇದೇ ಮೊದಲ ಬಾರಿಗೆ ಪರೋಕ್ಷವಾಗಿ ಮೌನ ಮುರಿದಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಅವರು ಕಿಡಿಕಾರಿದ್ದಾರೆ.
ಚುನಾವಣಾ ಸಮಯ ಹತ್ತಿರ ಬರುತ್ತಿರುವಾಗ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಅವರು ನನ್ನ ಖಾಸಗಿ ಜೀವನವನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಸುತ್ತಮುತ್ತಲಿನವರನ್ನೇ ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಆದರೆ ಇಂತಹ ಯಾವ ತಂತ್ರಗಳೂ ನನ್ನ ಮುಂದೆ ನಡೆಯುವುದಿಲ್ಲ. ಕುಟುಂಬದ ಬೆಂಬಲದ ಬಗ್ಗೆ ಮಾತನಾಡಿರುವ ಅವರು, ಎದುರಾಳಿಗಳ ಸೋಪ್ (SOP) ತಂತ್ರಗಳು ಈಗಾಗಲೇ ವಿಫಲವಾಗಿವೆ ಎಂದು ಹೇಳಿದರು.
ತಮ್ಮ ಭಾಷಣದ ಅಂತ್ಯದಲ್ಲಿ ಅತ್ಯಂತ ಕಠಿಣ ಪದಗಳನ್ನು ಬಳಸಿದ ವಿಜಯ್, ಭೂಮಿಯ ಮೇಲಿನ ಯಾವುದೇ ಶಕ್ತಿ ನನ್ನನ್ನು ಮುಟ್ಟಲು ಅಥವಾ ನಾನು ಆರಂಭಿಸಿರುವ ಈ ಕ್ರಾಂತಿಕಾರಿ ಚಳುವಳಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಘೋಷಿಸಿದರು. ಈ ಮೂಲಕ ತಮ್ಮ ವೈಯಕ್ತಿಕ ಜೀವನದ ಏರಿಳಿತಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
2025ರ ಡಿಸೆಂಬರ್ ತಿಂಗಳಿನಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾದ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವಿಜಯ್ ಅವರ ಈ ಇತ್ತೀಚಿನ ಭಾಷಣವು ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ. ವಿಜಯ್ ಅವರ ಈ ಆಕ್ರಮಣಕಾರಿ ಶೈಲಿಯ ಭಾಷಣ ಈಗ ತಮಿಳುನಾಡು ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.







