ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಕೇರಳ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ಅವರು ರಾಮಾಯಣದ ಕುರಿತು ನೀಡಿದ ಹೇಳಿಕೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಮತ್ತು ಹಿಂದುತ್ವದ ನಿಲುವುಗಳನ್ನು ಸದಾ ವಿರೋಧಿಸುವ ಪ್ರಕಾಶ್ ರಾಜ್, ಈ ಬಾರಿ ರಾಮಾಯಣವನ್ನು ವಿಡಂಬನೆಗೆ ಬಳಸಿಕೊಂಡಿರುವುದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಕಾಶ್ ರಾಜ್ ಅವರು ಪ್ರಸ್ತುತ ದೇಶದ ರಾಜಕೀಯ ಪರಿಸ್ಥಿತಿಯನ್ನು ಟೀಕಿಸಲು ರಾಮಾಯಣವನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದಾರೆ. ರಾಮಾಯಣದ ಕುರಿತು ತಮ್ಮದೇ ಆದ ಹೊಸ ವ್ಯಾಖ್ಯಾನ ನೀಡಿರುವ ಅವರು, ರಾಮ ಉತ್ತರ ಭಾರತದವನು ಮತ್ತು ರಾವಣ ದಕ್ಷಿಣ ಭಾರತದ ಒಬ್ಬ ಆದಿವಾಸಿ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ, ರಾಮ ಹಣ್ಣುಗಳನ್ನು ಕದ್ದಿದ್ದರಿಂದಲೇ ಇವರಿಬ್ಬರ ನಡುವೆ ಸಂಘರ್ಷ ಆರಂಭವಾಯಿತು ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದಾರೆ. ಇತಿಹಾಸವನ್ನು ಸರಿಯಾಗಿ ಅರಿಯದೆ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಅನೇಕರು ಟೀಕಿಸಿದ್ದಾರೆ. ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, ನೀವು ಇತಿಹಾಸವನ್ನು ಚರ್ಚ್‌ಗಳಿಂದ ಕಲಿತರೆ ಇಂತಹ ಅಸಂಬದ್ಧ ಮಾತುಗಳೇ ಬರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ಪ್ರಕಾಶ್ ರಾಜ್ ಅವರು ಕಲ್ಪಿತ ಕಥೆಗಳನ್ನು ಸೃಷ್ಟಿಸಿ ಹಿಂದೂ ಧರ್ಮವನ್ನು ಮತ್ತು ರಾಮಾಯಣವನ್ನು ಅಪಹಾಸ್ಯ ಮಾಡುತ್ತಿದ್ದಾರೆ, ಇವರ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ವಿಭಜನೆ ಸೃಷ್ಟಿಸಲು ಮತ್ತು ಗೋಮಾಂಸ ಸೇವನೆಯನ್ನು ಉತ್ತೇಜಿಸಲು ಇಂತಹ ಸುಳ್ಳು ಕಥೆಗಳನ್ನು ಹೆಣೆಯಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದರ ಜೊತೆಗೆ ಪ್ರಕಾಶ್ ರಾಜ್ ಅವರಿಗೆ ಸಿನಿಮಾಗಳಲ್ಲಿ ಅವಕಾಶ ನೀಡುತ್ತಿರುವ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರಂತಹ ದಿಗ್ಗಜರಿಗೂ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ದೃಶ್ಯಂ 3 ಮತ್ತು ವಾರಾಣಸಿ ಸಿನಿಮಾಗಳಲ್ಲಿ ಇಂತಹ ವ್ಯಕ್ತಿಗೆ ಯಾಕೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿ ಟ್ವಿಟರ್‌ನಲ್ಲಿ ಅಭಿಯಾನ ಶುರು ಮಾಡಿದ್ದಾರೆ.
ಇಷ್ಟೆಲ್ಲಾ ಅಸಂಬದ್ಧ ಮಾತುಗಳನ್ನು ವೇದಿಕೆಯಲ್ಲಿ ಹೇಳುತ್ತಿದ್ದರೂ ಅಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು ಹಲವರನ್ನು ಕೆರಳಿಸಿದೆ. ಸಭೆಯಲ್ಲಿದ್ದ ಯಾರೊಬ್ಬರೂ ಇದನ್ನು ಎದ್ದು ನಿಂತು ವಿರೋಧಿಸಲಿಲ್ಲವೇಕೆ? ಅಲ್ಲಿ ಹಿಂದೂಗಳು ಯಾರೂ ಇರಲಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಈ ಹಿಂದೆಯೂ ತಮ್ಮ ತಾಯಿಯ ಅಂತ್ಯಸಂಸ್ಕಾರದ ವಿಚಾರದಲ್ಲಿ ಪ್ರಕಾಶ್ ರಾಜ್ ಟೀಕೆಗೆ ಒಳಗಾಗಿದ್ದರು. ಈಗ ರಾಮಾಯಣದ ವಿಷಯವಾಗಿ ಎದ್ದಿರುವ ಈ ವಿವಾದದ ಕಿಡಿ ಎಲ್ಲಿಗೆ ಹೋಗಿ ನಿಲ್ಲಲಿದೆ ಮತ್ತು ಇದಕ್ಕೆ ನಟ ಪ್ರಕಾಶ್ ರಾಜ್ ಯಾವ ರೀತಿ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.







