ಕೊರೊನಾಗೆ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ರಮೇಶ್ ಟಿಕಾರಾಂ ಬಲಿ
ಬೆಂಗಳೂರು: ಕೊರೊನಾ ವೈರಸ್ ಗೆ ಅರ್ಜುನ ಪ್ರಶಸ್ತಿ ವಿಜೇತ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ರಮೇಶ್ ಟಿಕಾರಾಂ ಅವರು ಬಲಿಯಾಗಿದ್ದಾರೆ.
ರಮೇಶ್ ಟಿಕಾರಾಂ ಅವರು ಜ್ವರ, ಕೆಮ್ಮಿನಿಂದಾಗಿ ಜೂನ್ 29 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದ ಪರಿಣಾಮ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಇವರಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಎಂದು ವರದಿ ಬಂದಿತ್ತು. ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ಗುರುವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಸುಧೀರ್ ಅವರು ತಿಳಿಸಿದ್ದಾರೆ
ರಮೇಶ್ ಟಿಕಾರಾಂ ಅವರು ಶಾಟ್ ಪುಟ್, ಜಾವೆಲಿನ್ ಥ್ರೋ ಮೂಲಕ ತಮ್ಮ ಕೆರಿಯರ್ ಆರಂಭಿಸಿದ್ದರು.
ಅವರು 1995ರ ನಾಟಿಂಗ್ ಹ್ಯಾಮ್ ನಲ್ಲಿ ನಡೆದಿದ್ದ ಇಂಟರ್ ನ್ಯಾಷನಲ್ ಮೆಟ್ ನಲ್ಲಿ ಪದಕ ಪಡೆದಿದ್ದರು. ಆ ಬಳಿಕ ಸಿಡ್ನಿಯಲ್ಲಿ ನಡೆದಿದ್ದ ಚಾಂಪಿಯನ್ ಷಿಪ್ ನಲ್ಲಿ ಶಾಟ್ ಪುಟ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು.
ಬಳಿಕ ಬ್ಯಾಡ್ಮಿಂಟನ್ ವೃತ್ತಿಯಾಗಿ ಆಯ್ಕೆ ಮಾಡಿಕೊಂಡ ರಮೇಶ್ ಅವರು 2001ರ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದರು.
ಭಾರತದ ಅದ್ಭುತ ಪ್ರದರ್ಶನ ನೀಡಿದ್ದ ರಮೇಶ್ ಅವರಿಗೆ 2002ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.







