ಢಾಕಾ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಧಾರ್ಮಿಕ ಮತ್ತು ರಾಜಕೀಯ ಪರಿಸ್ಥಿತಿ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳನ್ನೇ ಮುಂದಿಟ್ಟುಕೊಂಡು ಬಾಂಗ್ಲಾದೇಶದ ಪ್ರಭಾವಿ ಮುಸ್ಲಿಂ ಧರ್ಮಗುರು ಮೌಲಾನಾ ಇನಾಯುತ್ತಲ್ಲಾ ಈಗ ನೇರ ಎಚ್ಚರಿಕೆಯೊಂದನ್ನು ನೀಡಿದ್ದು, ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.
ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಸಮುದಾಯದವರು ಅಸುರಕ್ಷಿತರಾದರೆ ಅಥವಾ ಅವರ ಮೇಲೆ ದೌರ್ಜನ್ಯ ನಡೆದರೆ, ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದೂ ಸಮುದಾಯದವರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಮೌಲಾನಾ ಇನಾಯುತ್ತಲ್ಲಾ ಗುಡುಗಿದ್ದಾರೆ. ಭಾರತದ ಆಂತರಿಕ ರಾಜಕೀಯ ವಿಚಾರಗಳನ್ನು ಬಾಂಗ್ಲಾದಲ್ಲಿರುವ ಹಿಂದೂಗಳ ಜೀವಕ್ಕೆ ಮುಡಿಪಾಗಿಟ್ಟಿರುವ ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಪಶ್ಚಿಮ ಬಂಗಾಳದ ಇತ್ತೀಚಿನ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಪ್ರಖರ ಹಿಂದೂವಾದಿ ನಾಯಕ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಹಿಂದೂಗಳ ರಕ್ಷಣೆಯೇ ನನ್ನ ಮೊದಲ ಆದ್ಯತೆ ಮತ್ತು ಹಿಂದೂಗಳ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಸುವೇಂದು ಅವರ ಈ ಕಠಿಣ ನಿಲುವುಗಳ ಬೆನ್ನಲ್ಲೇ ಈಗ ಬಾಂಗ್ಲಾದಿಂದ ಪ್ರತೀಕಾರದ ರೂಪದಲ್ಲಿ ಈ ಬೆದರಿಕೆ ಸಂದೇಶ ರವಾನೆಯಾಗಿದೆ.
ಈಗಾಗಲೇ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಕಳೆದ ಕೆಲವು ವಾರಗಳಿಂದ ಅಲ್ಲಿನ ಹಿಂದೂಗಳ ಮನೆಗಳ ಮೇಲೆ ನಿರಂತರವಾಗಿ ಕಲ್ಲು ತೂರಾಟ ನಡೆಸಲಾಗುತ್ತಿದೆ, ಅಷ್ಟೇ ಅಲ್ಲದೆ ಮನೆಗಳಿಗೆ ಬೆಂಕಿ ಹಚ್ಚುವ ಮೂಲಕ ಭಯೋತ್ಪಾದಕ ವಾತಾವರಣ ನಿರ್ಮಿಸಲಾಗಿದೆ. ಸಾರ್ವಜನಿಕವಾಗಿ ಹಿಂದೂಗಳನ್ನು ಹತ್ಯೆ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಅಲ್ಪಸಂಖ್ಯಾತರು ಪ್ರಾಣಭಯದಲ್ಲಿ ಬದುಕುತ್ತಿದ್ದಾರೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಧರ್ಮಗುರುವೊಬ್ಬರು ಬಹಿರಂಗವಾಗಿಯೇ ಸೇಡಿನ ಮಾತುಗಳನ್ನಾಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದು ಕೇವಲ ಧಾರ್ಮಿಕ ಸಂಘರ್ಷವಲ್ಲದೆ, ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಬಾಂಗ್ಲಾದಲ್ಲಿರುವ ಹಿಂದೂಗಳ ಸುರಕ್ಷತೆಯ ಬಗ್ಗೆ ಈಗ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿದೆ.






