ರಾಜ್ಯದಲ್ಲಿ ಮತ್ತೆ ಹಿಜಾಬ್ ಮತ್ತು ಸಮವಸ್ತ್ರ ಸಮರ ಮುನ್ನೆಲೆಗೆ ಬಂದಿದೆ. 2022ರ ಹಿಂದಿನ ಸರ್ಕಾರದ ಆದೇಶವನ್ನು ರದ್ದುಗೊಳಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಹೊಸ ಆದೇಶ ಹೊರಡಿಸಿದೆ. ಈ ಆದೇಶದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಸ್ಪಷ್ಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಘೋಷಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕೇಸರಿ ಶಾಲು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸುವ ಮೂಲಕ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ.
ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಯಂತೆ ಜನಿವಾರ, ರುದ್ರಾಕ್ಷಿ, ಶಿವದಾರ ಮತ್ತು ಹಿಜಾಬ್ ಧರಿಸಲು ಮುಕ್ತ ಅವಕಾಶವಿದೆ. ಆದರೆ ರಾಜಕೀಯ ಪ್ರೇರಿತ ಎನ್ನಲಾದ ಅಥವಾ ಪ್ರತಿಭಟನೆಯ ರೂಪದ ಕೇಸರಿ ಶಾಲುಗಳಿಗೆ ಮತ್ತು ಹೊಸ ರೂಪದ ಪೇಟಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಥಾನವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಈ ತಾರತಮ್ಯದ ಧೋರಣೆಯನ್ನು ಖಂಡಿಸಿರುವ ಬಿಜೆಪಿ ಮತ್ತು ವಿವಿಧ ಹಿಂದೂ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಕೆಂಡಕಾರಿವೆ. ಹಿಜಾಬ್ ಗೆ ಅವಕಾಶ ನೀಡಿ ಕೇಸರಿ ಶಾಲನ್ನು ದೂರ ಇಡುತ್ತಿರುವುದು ಓಲೈಕೆ ರಾಜಕಾರಣದ ಪರಮಾವಧಿ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಸಿಂಧೂರ, ಕುಂಕುಮ ಮತ್ತು ತಿಲಕದ ಬಗ್ಗೆ ಹೊಸ ಆದೇಶದಲ್ಲಿ ಸ್ಪಷ್ಟತೆ ಇಲ್ಲದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಶಾಲಾ ಆವರಣದಲ್ಲಿ ಸಮಾನತೆ ತರಬೇಕಿದ್ದ ಸರ್ಕಾರ ಈ ರೀತಿಯ ಭಿನ್ನ ನಿಲುವು ತಳೆಯುತ್ತಿರುವುದು ಸರಿಯಲ್ಲ ಎನ್ನುವುದು ಪ್ರತಿಪಕ್ಷಗಳ ವಾದವಾಗಿದೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜ್ಯದಲ್ಲಿ ಮತ್ತೆ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದಕ್ಕೆ ಕಿಚ್ಚು ಹಚ್ಚಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.








