ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಯುಗವೊಂದು ಆರಂಭವಾಗಿದ್ದು ಟಿ20 ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ವಿಶ್ರಾಂತಿ ನೀಡಿ ಶ್ರೇಯಸ್ ಅಯ್ಯರ್ ಅವರನ್ನು ತಂಡದ ನೂತನ ನಾಯಕನ್ನಾಗಿ ಬಿಸಿಸಿಐ ಘೋಷಿಸಿದೆ. ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸ ಹಾಗೂ ಜಪಾನ್ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಸರಣಿಗಳಿಗಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಂಬೈನಲ್ಲಿ ನಡೆದ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿಯ ಆಯ್ಕೆಯಲ್ಲಿ ಅಚ್ಚರಿ ಎಂಬಂತೆ ತಿಲಕ್ ವರ್ಮ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಅಷ್ಟೇ ಅಲ್ಲದೆ ಜೂನ್ 26 ಮತ್ತು 28 ರಂದು ಐರ್ಲೆಂಡ್ ವಿರುದ್ಧ ಬೆಲ್ಫಾಸ್ಟ್ ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಸರಣಿಯಲ್ಲಿ ತಿಲಕ್ ವರ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಚೆಸ್ಟರ್ ಲೀ ಸ್ಟ್ರೀಟ್ ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಪೂರ್ಣ ಪ್ರಮಾಣದ ನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಅಚ್ಚರಿಯ ಆಯ್ಕೆ ವೈಭವ್ ಸೂರ್ಯವಂಶಿ
ಈ ತಂಡದ ಪ್ರಕಟಣೆಯಲ್ಲಿ ಎಲ್ಲರ ಗಮನ ಸೆಳೆದಿರುವುದು ಕೇವಲ 15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಸೇರ್ಪಡೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ವೈಭವ್ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಗಮನಿಸಿ ಆಯ್ಕೆ ಸಮಿತಿ ಈ ಐತಿಹಾಸಿಕ ಅವಕಾಶ ನೀಡಿದೆ.
ಸೂರ್ಯಕುಮಾರ್ ಯಾದವ್ ಗಿಲ್ಲ ಸ್ಥಾನ
ಕಳೆದ ಮಾರ್ಚ್ ತಿಂಗಳಲ್ಲಿ ಭಾರತ ತಂಡವನ್ನು ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಈ ಮೂರೂ ಸರಣಿಗಳಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ಏಷ್ಯನ್ ಗೇಮ್ಸ್ ಗಾಗಿ ಪ್ರಕಟಿಸಲಾದ ತಂಡದಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮರಳಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದೆ.
ಇಂಗ್ಲೆಂಡ್ ಮತ್ತು ಐರ್ಲೆಂಡ್ ಸರಣಿಗೆ ಆಯ್ಕೆಯಾದ ಭಾರತ ತಂಡ
ಶ್ರೇಯಸ್ ಅಯ್ಯರ್ ನಾಯಕ
ತಿಲಕ್ ವರ್ಮ ಉಪ ನಾಯಕ
ರವಿ ಬಿಷ್ಣೋಯಿ
ಅಭಿಷೇಕ್ ಶರ್ಮ
ನಿತೀಶ್ ಕುಮಾರ್ ರೆಡ್ಡಿ
ಮುಹಮ್ಮದ್ ಸಿರಾಜ್
ಸಂಜು ಸ್ಯಾಮ್ಸನ್
ಅಕ್ಷರ್ ಪಟೇಲ್
ಹರ್ಷಿತ್ ರಾಣಾ
ಇಶಾನ್ ಕಿಶನ್
ವಾಷಿಂಗ್ಟನ್ ಸುಂದರ್
ಅರ್ಶದೀಪ್ ಸಿಂಗ್
ಶಿವಂ ದುಬೆ
ವರುಣ್ ಚಕ್ರವರ್ತಿ
ಪ್ರಿನ್ಸ್ ಯಾದವ್
ವೈಭವ್ ಸೂರ್ಯವಂಶಿ
ಏಷ್ಯನ್ ಗೇಮ್ಸ್ ಸರಣಿಗೆ ಭಾರತ ತಂಡ
ಶ್ರೇಯಸ್ ಅಯ್ಯರ್ ನಾಯಕ
ತಿಲಕ್ ವರ್ಮ ಉಪ ನಾಯಕ
ಜಸ್ಪ್ರೀತ್ ಬುಮ್ರಾ
ರವಿ ಬಿಷ್ಣೋಯಿ
ಅಭಿಷೇಕ್ ಶರ್ಮ
ನಿತೀಶ್ ಕುಮಾರ್ ರೆಡ್ಡಿ
ಸಂಜು ಸ್ಯಾಮ್ಸನ್
ಅಕ್ಷರ್ ಪಟೇಲ್
ಹರ್ಷಿತ್ ರಾಣಾ
ಇಶಾನ್ ಕಿಶನ್
ವಾಷಿಂಗ್ಟನ್ ಸುಂದರ್
ಅರ್ಶದೀಪ್ ಸಿಂಗ್
ಶಿವಂ ದುಬೆ
ವರುಣ್ ಚಕ್ರವರ್ತಿ
ವೈಭವ್ ಸೂರ್ಯವಂಶಿ
ಈ ಹೊಸ ತಂಡವು ಯುವ ಮತ್ತು ಅನುಭವಿ ಆಟಗಾರರ ಸಮ್ಮಿಲನವಾಗಿದ್ದು ಮುಂಬರುವ ಪ್ರಮುಖ ಸರಣಿಗಳಲ್ಲಿ ಟೀಂ ಇಂಡಿಯಾ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಅಡಿಯಲ್ಲಿ ತಂಡ ಹೊಸ ಹಾದಿಯಲ್ಲಿ ಸಾಗಲು ಸಜ್ಜಾಗಿದೆ.








