ಬಹುಭಾಷಾ ನಟ ಪ್ರಕಾಶ್ ರೈ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನಡುವಿನ ವಾಕ್ಸಮರ ಈಗ ಮತ್ತೊಂದು ಸ್ಫೋಟಕ ಹಂತಕ್ಕೆ ತಲುಪಿದೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪ್ರಕಾಶ್ ರೈ, ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಪ್ರಶ್ನೆಗಳನ್ನು ಎತ್ತುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪವನ್ ಕಲ್ಯಾಣ್ ಅವರ ರಾಜಕೀಯ ನಿಲುವುಗಳನ್ನು ಬಹಿರಂಗವಾಗಿ ಟೀಕಿಸುತ್ತಿರುವ ಪ್ರಕಾಶ್ ರೈ, ಇದೀಗ ಪವನ್ ಅವರ ಸಹೋದರ ನಾಗಬಾಬು ಅವರಿಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಅವರ ರ್ಯಾಲಿಗೆ ಅನುಮತಿ ನಿರಾಕರಿಸಿದ ಸಂದರ್ಭದಲ್ಲಿ ಅವರು ನೀಡಿದ್ದ ತೆಲಂಗಾಣ ಯಾರಪ್ಪನ ಆಸ್ತಿಯಲ್ಲ ಎಂಬ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಪ್ರಕಾಶ್ ರೈ ಅವರು ಪವನ್ ಕಲ್ಯಾಣ್ ಅವರ ಕಾಲೆಳೆದಿದ್ದರು. ಇದು ಪವನ್ ಅಭಿಮಾನಿಗಳು ಹಾಗೂ ಅವರ ಆಪ್ತ ವಲಯದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಅಣ್ಣ ಹಾಗೂ ಜನಸೇನಾ ಪಕ್ಷದ ಪ್ರಮುಖ ನಾಯಕ ನಾಗಬಾಬು ಅವರು ಪ್ರಕಾಶ್ ರೈ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು.
ಪವನ್ ಕಲ್ಯಾಣ್ ಅವರ ಫೋಟೋ ಹಂಚಿಕೊಂಡಿದ್ದ ನಾಗಬಾಬು, ನಾಯಕನ ನಿರ್ಧಾರವೇ ಅಂತಿಮ. ಅವನ ಹಾದಿಯಲ್ಲಿ ಯಾರೂ ಅಡೆತಡೆಗಳನ್ನು ನೋಡಿಲ್ಲ. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದು ನಾಯಕನಿಗೆ ಮಾತ್ರ ಗೊತ್ತು. ನಿಮ್ಮ ಅನುಮಾನಗಳನ್ನು ಬದಿಗಿಡಿ, ನಾಲಿಗೆಯನ್ನು ಮೌನಗೊಳಿಸಿ ಮತ್ತು ಯಾವುದೇ ಪ್ರಶ್ನೆಗಳನ್ನು ಕೇಳದೆ ನಾಯಕನನ್ನು ಅನುಸರಿಸಿ ಎಂದು ಬರೆದುಕೊಂಡಿದ್ದರು. ನಾಗಬಾಬು ಅವರ ಈ ಮಾತುಗಳು ಅಭಿಮಾನಿಗಳಿಗೆ ಉತ್ತೇಜನ ನೀಡಿದರೂ, ಪ್ರಜಾಪ್ರಭುತ್ವದ ಆಶಯಗಳನ್ನು ಪ್ರಶ್ನಿಸುವಂತಿದ್ದವು.
ನಾಗಬಾಬು ಅವರ ಈ ಸರ್ವಾಧಿಕಾರಿ ಧೋರಣೆಯ ಹೇಳಿಕೆಗೆ ಪ್ರಕಾಶ್ ರೈ ಅತ್ಯಂತ ಗಡುಸಾದ ಭಾಷೆಯಲ್ಲಿ ಉತ್ತರಿಸಿದ್ದಾರೆ. ಪ್ರಶ್ನೆ ಕೇಳಬೇಡಿ ಎಂದು ಹೇಳಲು ನಾವೇನು ಕುದುರೆಗಳಾ? ನೀವು ಹೇಳಿದಂತೆ ಕೇಳಿಕೊಂಡು ಸುಮ್ಮನಿರಲು ನಾವೇನು ಪ್ರಾಣಿಗಳಲ್ಲ. ಈ ರೀತಿಯ ಬೆದರಿಕೆ ತಂತ್ರಗಳನ್ನೆಲ್ಲ ನಮ್ಮ ಮುಂದೆ ಇಟ್ಟುಕೊಳ್ಳಬೇಡಿ ಎಂದು ಗುಡುಗಿದ್ದಾರೆ.
ಮುಂದುವರಿದು ಮಾತನಾಡಿದ ಪ್ರಕಾಶ್ ರೈ, ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕು. ಯಾವುದೇ ನಾಯಕನಾದರೂ ಸರಿ, ಅವರು ಜನರಿಗೆ ಉತ್ತರ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಈ ಮೂಲಭೂತ ವಿಷಯ ನಿಮಗೆ ಅರ್ಥವಾಗುತ್ತಿದೆಯೇ? ಎಂದು ಪ್ರಶ್ನಿಸುವ ಮೂಲಕ ನಾಗಬಾಬು ಅವರಿಗೆ ತಿರುಗೇಟು ನೀಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ, ನಾಗಬಾಬು ಮತ್ತು ಪವನ್ ಕಲ್ಯಾಣ್ ಅವರನ್ನು ಮೆಗಾ ಬ್ರದರ್ಸ್ ಎಂದೇ ಕರೆಯಲಾಗುತ್ತದೆ. ಪವನ್ ಕಲ್ಯಾಣ್ ಅವರ ರಾಜಕೀಯ ಬೆಳವಣಿಗೆಯಲ್ಲಿ ನಾಗಬಾಬು ಅವರ ಪಾತ್ರ ದೊಡ್ಡದಿದೆ. ಆದರೆ ಇದೀಗ ಪ್ರಕಾಶ್ ರೈ ಅವರ ನೇರ ವಾಗ್ದಾಳಿ ಆಂಧ್ರ ಮತ್ತು ತೆಲಂಗಾಣ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಸದ್ಯಕ್ಕೆ ಈ ಇಬ್ಬರು ನಟರ ನಡುವಿನ ಟ್ವೀಟ್ ಸಮರ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳಿಗೆ ವೇದಿಕೆಯಾಗಿದೆ.








