ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 13ರಿಂದ 18ರವರೆಗೆ ಯುರೋಪ್ ಪ್ರವಾಸ ಕೈಗೊಳ್ಳಲಿದ್ದು, ಪ್ರಮುಖ ರಾಷ್ಟ್ರಗಳಾದ ಫ್ರಾನ್ಸ್ ಹಾಗೂ ಸ್ಲೋವಾಕಿಯಾ ಗೆ ಭೇಟಿ ನೀಡಲಿದ್ದಾರೆ. ಭಾರತದ ಜಾಗತಿಕ ಪ್ರಭಾವ, ಆರ್ಥಿಕ ಸಹಕಾರ ಹಾಗೂ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.
ಪ್ರವಾಸದ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಫ್ರಾನ್ಸ್ನ ನೈಸ್ ನಗರಕ್ಕೆ ಆಗಮಿಸಲಿದ್ದು, ಅಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಭಾರತ-ಫ್ರಾನ್ಸ್ ನಡುವಿನ ರಕ್ಷಣಾ ಸಹಕಾರ, ವ್ಯಾಪಾರ, ತಂತ್ರಜ್ಞಾನ, ಹಸಿರು ಇಂಧನ, ಬಾಹ್ಯಾಕಾಶ ಹಾಗೂ ಹೂಡಿಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಉಭಯ ದೇಶಗಳ ನಡುವಿನ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವತ್ತ ಈ ಭೇಟಿ ಮಹತ್ವದ್ದಾಗಿದೆ.
ಫ್ರಾನ್ಸ್ ಭೇಟಿಯ ಬಳಿಕ ಪ್ರಧಾನಿ ಮೋದಿ ಸ್ಲೋವಾಕಿಯಾಗೆ ತೆರಳಿ ಅಲ್ಲಿನ ನಾಯಕತ್ವದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ಯುರೋಪ್ ರಾಷ್ಟ್ರಗಳೊಂದಿಗೆ ಭಾರತದ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ಮುಂದುವರಿಯಲಿದೆ.








