ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಎಲ್ಲಾ ಊಹಾಪೋಹಗಳಿಗೆ ಇದೀಗ ಖುದ್ದು ಸಾಹುಕಾರ್ ಸ್ಪಷ್ಟನೆ ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮುಕ್ತವಾಗಿ ಮಾತನಾಡಿದ ಅವರು, ಪಕ್ಷದ ಆಂತರಿಕ ವಿಚಾರಗಳು, ಅಹಿಂದ ಸಂಘಟನೆ, ಭವಿಷ್ಯದ ರಾಜಕೀಯ ಗುರಿ ಹಾಗೂ ಖಾತೆ ಹಂಚಿಕೆಯ ಹಿಂದಿನ ರಹಸ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಮ್ಮ ನಡುವೆ ಬಿರುಕಿಲ್ಲ, ಇದನ್ನೆಲ್ಲ ಸೃಷ್ಟಿಸಿದ್ದು ಐಟಿ ಸೆಲ್
ನಾನೊಂದು ತೀರ ನೀನೊಂದು ತೀರ ಎಂಬಂತೆ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದ್ದವು. ಈ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯನವರಿಗೂ ನನಗೂ ಯಾವುದೇ ರೀತಿಯ ಭಿನ್ನಾಭಿಪ್ರಾಯಾಗಳಿಲ್ಲ. ನಮ್ಮ ನಡುವೆ ಗೊಂದಲವೇ ಇಲ್ಲ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಆದರೆ ನಮಗೆ ಪರಿಚಯವಿರುವ ನಮ್ಮದೇ ವಲಯದ ಕೆಲವು ಐಟಿ ಸೆಲ್ ಕಿಡಿಗೇಡಿಗಳು ಈ ಸುಳ್ಳು ಸುದ್ದಿಗೆ ಬೇಕೆಂದೇ ಹೆಚ್ಚಿನ ಪ್ರಚಾರ ಕೊಟ್ಟು ಗೊಂದಲ ಸೃಷ್ಟಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ ಎಂದು ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ಅಹಿಂದ ಸಂಘಟನೆಗೆ ಹೊಸ ಬಲ ತುಂಬುವ ಮುನ್ಸೂಚನೆ
ತಮ್ಮ ರಾಜಕೀಯದ ಪ್ರಮುಖ ಅಸ್ತ್ರವಾದ ಅಹಿಂದ ಸಂಘಟನೆಯ ಬಗ್ಗೆಯೂ ದನಿ ಎತ್ತಿದ ಸಚಿವರು, ಅಹಿಂದ ಸಂಘಟನೆ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಅದು ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದದ್ದಲ್ಲ. ಪಕ್ಷದ ಚೌಕಟ್ಟನ್ನು ಮೀರಿಯೂ ಅಹಿಂದ ಸಂಘಟನೆಯ ಕೆಲಸಗಳು ತಳಮಟ್ಟದಲ್ಲಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಈ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ನಾವು ತೆಗೆದುಕೊಳ್ಳಲಿದ್ದೇವೆ ಎಂದು ಗುಡುಗಿದ್ದಾರೆ.
ಪಕ್ಷಕ್ಕಾಗಿ ಬೆವರು ಹರಿಸಿದವರಿಗೆ ಅಧಿಕಾರವೆಂಬ ಕೂಲಿ ನಿಶ್ಚಿತ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಕುರಿತ ಚರ್ಚೆಗಳಿಗೆ ಮಾರ್ಮಿಕವಾಗಿ ಉತ್ತರಿಸಿದ ಸತೀಶ್, ರಾಜಕಾರಣದಲ್ಲಿ ಯಾರು ನಿಷ್ಠೆಯಿಂದ ದುಡಿಯುತ್ತಾರೋ ಅವರಿಗೆ ತಕ್ಕ ಪ್ರತಿಫಲ ಅಂದರೆ ಕೂಲಿ ಸಿಕ್ಕೇ ಸಿಗುತ್ತದೆ. ರಾಮಕೃಷ್ಣ ಹೆಗಡೆ ಅವರ ಸರ್ಕಾರದ ಬಳಿಕ ರಾಜ್ಯದಲ್ಲಿ ಯಾವೊಂದು ಸರ್ಕಾರವೂ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ. ಈ ಬಾರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಿದೆವು. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಕ್ಕಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಸಿಗಲೇಬೇಕು ಎಂಬುದು ಪ್ರಜಾಪ್ರಭುತ್ವದ ನ್ಯಾಯ ಎಂದು ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ನನಗಿನ್ನೂ ವಯಸ್ಸಿದೆ, 2028ರವರೆಗೆ ಕಾದು ನೋಡೋಣ
ಭವಿಷ್ಯದ ಮುಖ್ಯಮಂತ್ರಿ ರೇಸ್ ಮತ್ತು 2028ರ ಚುನಾವಣೆಯ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿದ ಸತೀಶ್ ಜಾರಕಿಹೊಳಿ, ಈಗಲೇ 2028ರ ಬಗ್ಗೆ ಚರ್ಚೆ ಮಾಡುವುದು ತೀರಾ ಅವಸರದ ನಿರ್ಧಾರವಾಗುತ್ತದೆ. ಪಕ್ಷದಲ್ಲಿ ನನಗೂ ಸೂಕ್ತ ಸ್ಥಾನಮಾನ ಹಾಗೂ ಸಚಿವ ಸ್ಥಾನ ಸಿಕ್ಕಿದೆ, ಇದರಿಂದ ನನಗೆ ಡಬಲ್ ಸಮಾಧಾನವಿದೆ. ಅಧಿಕಾರ ಇರಲಿ ಇಲ್ಲದಿರಲಿ, ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ನಾನು ಪಕ್ಷಕ್ಕಾಗಿ ಹಗಲಿರುಳು ಕೆಲಸ ಮಾಡಿದ್ದೇನೆ. ಡಿ. ಕೆ. ಶಿವಕುಮಾರ್ ಅವರು ಪಕ್ಷವನ್ನು ಗೆಲ್ಲಿಸಿದ್ದಾರೆ, ಅವರಿಗೆ ಅದರ ಫಲ ಸಿಗುತ್ತಿದೆ. ನನಗೂ ಇನ್ನು ವಯಸ್ಸಿದೆ, ಭವಿಷ್ಯದಲ್ಲಿ ಅವಕಾಶಗಳು ಒಲಿದು ಬರಲಿವೆ, ಅಲ್ಲಿಯವರೆಗೆ ವೇಯ್ಟ್ ಮಾಡೋಣ ಎಂದು ತಮ್ಮ ದೊಡ್ಡ ಹುದ್ದೆಯ ಆಕಾಂಕ್ಷೆಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ಕ್ರೀಡಾ ಖಾತೆ ಸಿಕ್ಕಿದ್ದರೆ ರಾಜ್ಯದಲ್ಲಿ ಕ್ರೀಡಾ ಕ್ರಾಂತಿಯೇ ಆಗುತ್ತಿತ್ತು
ಖಾತೆ ಹಂಚಿಕೆ ಬಗ್ಗೆಯೂ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಸಚಿವರು, ನೂತನ ಮುಖ್ಯಮಂತ್ರಿಗಳು ಬಂದಾಗ ಅಸಮಾಧಾನಗಳಿರುವುದು ಸಹಜ, ಅದನ್ನು ಸರಿಪಡಿಸಿಕೊಂಡು ಟೇಕಾಫ್ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಕೂಡ ಹೆಚ್ಚುವರಿಯಾಗಿ ಕ್ರೀಡಾ ಖಾತೆಯನ್ನು ನೀಡುವಂತೆ ಬೇಡಿಕೆ ಇಟ್ಟಿದ್ದೆ. ಧರ್ಮಸಿಂಗ್ ಅವರ ಕಾಲದಿಂದಲೂ ನನಗೆ ಕ್ರೀಡಾ ಖಾತೆಯ ಮೇಲೆ ವಿಶೇಷ ಒಲವಿತ್ತು. ಒಂದು ವೇಳೆ ಆ ಖಾತೆ ನನಗೆ ಸಿಕ್ಕಿದ್ದರೆ ಕ್ರೀಡಾ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದ್ದೆವು. ಆದರೆ ಆ ಖಾತೆಯನ್ನು ಸಚಿವ ಜಿ. ಪರಮೇಶ್ವರ್ ಅವರಿಗೆ ನೀಡಲಾಗಿದೆ. ಅವರಿಗೂ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಇರುವುದರಿಂದ ಕೇಳಿ ಪಡೆದಿರಬಹುದು, ಇದರಲ್ಲಿ ನನಗೆ ಯಾವುದೇ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ, ತಮ್ಮ ಆಂತರಿಕ ಅಸಮಾಧಾನಗಳನ್ನು ಬದಿಗೊತ್ತಿ, ಪಕ್ಷದ ಹಿತದೃಷ್ಟಿಯಿಂದ ತಾವು ಸರ್ಕಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಹೆಜ್ಜೆ ಹಾಕುತ್ತಿರುವುದಾಗಿ ಸತೀಶ್ ಜಾರಕಿಹೊಳಿ ಈ ಮೂಲಕ ರಾಜ್ಯದ ಜನತೆಗೆ ಸಂದೇಶ ರವಾನಿಸಿದ್ದಾರೆ.








