ಟ್ವಿಟರ್ನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ಭಾಷಣ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಸ್ವಂತ ಜಿಲ್ಲೆಯ ಸರ್ಕಾರಿ ಕಾಲೇಜಿನ ಮೇಲ್ಛಾವಣಿಯನ್ನು ಉಳಿಸಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ನಡೆದ ಕಾಲೇಜು ಮೇಲ್ಛಾವಣಿ ಕುಸಿತದ ಘಟನೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಅಕ್ಕಿ ಹಗರಣ ಮತ್ತು ಗೊಬ್ಬರದ ಅಭಾವದ ಬಗ್ಗೆ ಸರಣಿ ಪೋಸ್ಟ್ಗಳನ್ನು ಹಾಕಿರುವ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಲಬುರಗಿ ಕಾಲೇಜು ದುಸ್ಥಿತಿಗೆ ಆಕ್ರೋಶ
ಕಲಬುರಗಿ ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪಾಠ ನಡೆಯುತ್ತಿದ್ದಾಗಲೇ ಮೇಲ್ಛಾವಣಿಯ ಸಿಮೆಂಟ್ ಪದರು ಕುಸಿದು ಐವರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆಯನ್ನು ಆರ್ ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ದಿನಬೆಳಗಾದರೆ ಬಿಜೆಪಿ, ಆರ್ಎಸ್ಎಸ್ ಮತ್ತು ಇತಿಹಾಸದ ಬಗ್ಗೆ ಜ್ಞಾನ ಬೋಧನೆ ಮಾಡುವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಜಿಲ್ಲೆಯ ಶಾಲಾ ಕಟ್ಟಡಗಳ ಸ್ಥಿತಿಯನ್ನು ನೋಡಲು ಪುರುಸೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದ ತರಗತಿಯಲ್ಲಿ ಇಂತಹ ಘಟನೆ ನಡೆದಿರುವುದು ಕೇವಲ ಅಪಘಾತವಲ್ಲ, ಇದು ಕಾಂಗ್ರೆಸ್ ಸರ್ಕಾರದ ಜವಾಬ್ದಾರಿರಹಿತ ನಿರ್ಲಕ್ಷ್ಯದ ಪರಮಾವಧಿ ಎಂದು ಅವರು ಟೀಕಿಸಿದ್ದಾರೆ. ಸಂವಿಧಾನದ ಭವಿಷ್ಯದ ಬಗ್ಗೆ ಮಾತನಾಡುವವರು ಮೊದಲು ಹೆಣ್ಣುಮಕ್ಕಳು ಕಲಿಯುವ ಕಾಲೇಜಿಗೆ ಭದ್ರತೆ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ.
ಅನ್ನಭಾಗ್ಯದ ಅಕ್ಕಿ ಲೂಟಿ
ರಾಜ್ಯದಲ್ಲಿ ಬಡವರ ಪಡಿತರ ಅಕ್ಕಿಯನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಗಿನ ಕೆಳಗೆ ಅಕ್ಕಿ ಮಾಫಿಯಾ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನ ಶಾಂತಿನಗರದ ಆಹಾರ ನಿಗಮದ ಗೋದಾಮುಗಳಿಂದಲೇ ನೂರಾರು ಕ್ವಿಂಟಲ್ ಅಕ್ಕಿ ಮತ್ತು ರಾಗಿಯನ್ನು ಖಾಸಗಿ ಗೋದಾಮುಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಗೋದಾಮುಗಳಲ್ಲಿ ಸಿಸಿಟಿವಿ ಇಲ್ಲದಿರುವುದು ವ್ಯವಸ್ಥಿತ ಲೂಟಿಗೆ ಸರ್ಕಾರವೇ ಮಾಡಿಕೊಟ್ಟ ದಾರಿಯಾಗಿದೆ. ಬಡವರ ಹೊಟ್ಟೆ ಹೊಡೆಯುವ ಈ ಲೂಟಿ ಸರ್ಕಾರದ ವಿರುದ್ಧ ಜನ ದಂಗೆ ಏಳುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಅಕ್ಕಿ ಕಳ್ಳರನ್ನು ಮತ್ತು ಈ ಮಾಫಿಯಾದ ಸೂತ್ರಧಾರರನ್ನು ತಕ್ಷಣವೇ ಜೈಲಿಗಟ್ಟಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರೈತರ ಶಾಪಕ್ಕೆ ಗುರಿಯಾದ ಕಾಂಗ್ರೆಸ್ ಸರ್ಕಾರ
ರಾಜ್ಯದಾದ್ಯಂತ ರಸಗೊಬ್ಬರದ ತೀವ್ರ ಅಭಾವವಿದ್ದು, ರೈತರು ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ 10 ಲಕ್ಷ ಮೆಟ್ರಿಕ್ ಟನ್ಗಿಂತ ಹೆಚ್ಚು ಗೊಬ್ಬರ ದಾಸ್ತಾನು ಇದೆ ಎಂದು ಹೇಳಲಾಗುತ್ತಿದೆ, ಆದರೆ ವಾಸ್ತವದಲ್ಲಿ ಕೊಪ್ಪಳ, ಗದಗ, ಹಾವೇರಿ, ಕಲಬುರಗಿ ಮತ್ತು ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗೊಬ್ಬರವೇ ಇಲ್ಲದಂತಾಗಿದೆ. ಕಾಗದದಲ್ಲಿ ಮಾತ್ರ ದಾಸ್ತಾನು ತೋರಿಸಿ ರೈತರಿಗೆ ವಂಚಿಸಲಾಗುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ರೈತರ ಶಾಪ ತಟ್ಟಿದ ಯಾವ ಸರ್ಕಾರವೂ ಉಳಿದಿಲ್ಲ, ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೂ ಅದೇ ಗತಿ ಕಾದಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಕ್ಷಣದ ಕ್ರಮಕ್ಕೆ ಆಗ್ರಹ
ಕಾಲೇಜು ಮೇಲ್ಛಾವಣಿ ಕುಸಿತದಿಂದ ಗಾಯಗೊಂಡ ವಿದ್ಯಾರ್ಥಿನಿಯರಿಗೆ ಸರ್ಕಾರ ಉನ್ನತ ಮಟ್ಟದ ಉಚಿತ ಚಿಕಿತ್ಸೆ ನೀಡಬೇಕು ಮತ್ತು ಈ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ. ಅಲ್ಲದೆ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ತಕ್ಷಣವೇ ನಡೆಸುವಂತೆ ಅವರು ಮುಖ್ಯಮಂತ್ರಿಗಳಿಗೆ ಮತ್ತು ಡಿ ಕೆ ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಗುಡುಗಿದ್ದಾರೆ.








