ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಕುಮಾರಕೃಪಾ ಅತಿಥಿಗೃಹದ ವಿಚಾರವಾಗಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿಯನ್ನಾಗಿ ಈ ಐತಿಹಾಸಿಕ ಕಟ್ಟಡವನ್ನು ಪರಿವರ್ತಿಸುವ ಸರ್ಕಾರದ ನಿರ್ಧಾರದ ವಿರುದ್ಧ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಪ್ರಸ್ತುತ ತಂಗಿರುವ ಕಾವೇರಿ ನಿವಾಸದಲ್ಲೇ ತಮ್ಮ ಶಾಸಕ ಸ್ಥಾನದ ಅವಧಿ ಮುಗಿಯುವವರೆಗೂ ಮುಂದುವರಿಯಲು ನಿರ್ಧರಿಸಿದ್ದಾರೆ. ಇದಕ್ಕೆ ಯಾವುದೇ ತಕರಾರು ಎತ್ತದ ಡಿ.ಕೆ. ಶಿವಕುಮಾರ್ ಅವರು, ಈಗ ಕುಮಾರಕೃಪಾ ಅತಿಥಿಗೃಹವನ್ನು ತಮ್ಮ ಗೃಹ ಕಚೇರಿಯನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕುಮಾರಸ್ವಾಮಿ ಅವರು ಸರ್ಕಾರದ ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಪಾರಂಪರಿಕ ಕಟ್ಟಡಕ್ಕೆ ಅಪಾಯದ ಆತಂಕ
ಬೆಂಗಳೂರಿನ ಹೃದಯಭಾಗದಲ್ಲಿರುವ 160 ವರ್ಷಗಳ ಇತಿಹಾಸವಿರುವ ಈ ಕಟ್ಟಡವನ್ನು ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮಹಾರಾಜರ ಕಾಲದ ಈ ಸುಂದರ ಕಟ್ಟಡವನ್ನು ನವೀಕರಣದ ಹೆಸರಿನಲ್ಲಿ ಒಡೆಯುವ ಮತ್ತು ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಈ ಐತಿಹಾಸಿಕ ಕಟ್ಟಡಕ್ಕೆ ಧಕ್ಕೆ ಬಂದರೆ ಇತಿಹಾಸವೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ವಿಧಾನಸೌಧದ ಬಗ್ಗೆ ಕುಮಾರಸ್ವಾಮಿ ವ್ಯಕ್ತಪಡಿಸಿದ ಆತಂಕ
ಮುಂದಿನ ಎಂಟು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಮಾತನಾಡಿದ ಹೆಚ್‌ಡಿಕೆ, ಇವರು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ವಿಧಾನಸೌಧದ ಕಥೆ ಏನಾಗಬಹುದು ಎಂಬ ಗಾಬರಿ ನನಗಿದೆ ಎಂದಿದ್ದಾರೆ. ಇತಿಹಾಸ ಪ್ರಸಿದ್ಧ ಕಟ್ಟಡಗಳನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವ ಇವರ ಧೋರಣೆ ಸರಿಯಲ್ಲ ಎಂದು ಅವರು ಗುಡುಗಿದ್ದಾರೆ.
ಗಾಂಧೀಜಿ ತಂಗಿದ್ದ ಪುಣ್ಯ ಭೂಮಿ
ಕುಮಾರಕೃಪಾ ಅತಿಥಿಗೃಹವು ಕೇವಲ ಒಂದು ಕಟ್ಟಡವಲ್ಲ, ಅದು ದಿವನ್ ಶೇಷಾದ್ರಿ ಅಯ್ಯರ್ ಅವರ ನೆನಪಿನ ಶಕ್ತಿ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಇಲ್ಲಿ ತಂಗಿದ್ದರು ಎನ್ನುವುದು ಈ ಕಟ್ಟಡದ ಮಹತ್ವವನ್ನು ಸಾರುತ್ತದೆ. ಅಂತಹ ಪಾರಂಪರಿಕ ತಾಣವನ್ನು ನವೀಕರಣದ ಹೆಸರಿನಲ್ಲಿ ವಿರೂಪಗೊಳಿಸುವುದು ಇತಿಹಾಸಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕವು ತೀವ್ರವಾಗಿ ಆಕ್ಷೇಪಿಸಿದೆ. ಬೆಂಗಳೂರಿನ ಅಸ್ಮಿತೆಯಾಗಿರುವ ಕಟ್ಟಡವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಹೇಯ ಕೃತ್ಯ ಎಂದು ಜೆಡಿಎಸ್ ಬಣ್ಣಿಸಿದೆ.
ಬೇರೆ ನಿವಾಸಗಳ ಆಯ್ಕೆ ಇಲ್ಲವೇ?
ನಗರದಲ್ಲಿ ಈಗಾಗಲೇ ಅನುಗ್ರಹ ಮತ್ತು ಕಾವೇರಿಯಂತಹ ಸುಸಜ್ಜಿತ ಸರ್ಕಾರಿ ನಿವಾಸಗಳು ಲಭ್ಯವಿರುವಾಗ, ಪಾರಂಪರಿಕ ಕಟ್ಟಡಕ್ಕೆ ಕೈ ಹಾಕಿರುವುದೇಕೆ ಎಂಬ ಪ್ರಶ್ನೆ ಕೇಳಿಬರುತ್ತಿದೆ. ನವೀಕರಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ವ್ಯಯ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ದೂರಿದ್ದಾರೆ. ಅಷ್ಟೇ ಅಲ್ಲದೆ, ಕುಮಾರಕೃಪಾದ ಪಕ್ಕದಲ್ಲೇ ಹೊಸ ಕಟ್ಟಡಗಳಿದ್ದರೂ ಈ ಪುರಾತನ ಕಟ್ಟಡವನ್ನೇ ಗುರಿಯಾಗಿಸಿಕೊಂಡಿರುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಕುಮಾರಕೃಪಾ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದೆ.








