ಸಿಲಿಕಾನ್ ಸಿಟಿ ಬೆಂಗಳೂರು ಇಂದು ರಸ್ತೆ ಗುಂಡಿಗಳ ನಗರ ಎಂಬ ಕುಖ್ಯಾತಿ ಪಡೆದಿದೆ. ದೇಶ ವಿದೇಶಗಳಿಂದ ಹೂಡಿಕೆದಾರರನ್ನು ಸೆಳೆಯುವ ಈ ಮಹಾನಗರದಲ್ಲಿ ಸವಾರರು ಪ್ರತಿ ನಿತ್ಯ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದೀಗ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವ ಕೃಷ್ಣ ಬೈರೇಗೌಡ ಅವರು ಈ ಸಮಸ್ಯೆಗೆ ಅಂತ್ಯ ಹಾಡುತ್ತಾರಾ ಎಂಬ ದೊಡ್ಡ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.
ಇತ್ತೀಚೆಗೆ ನಡೆದ ಇಲಾಖಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಕೃಷ್ಣ ಬೈರೇಗೌಡ ಅವರು ರಸ್ತೆ ನಿರ್ಮಾಣ ಮಾಡುವುದು ಅಷ್ಟೊಂದು ಕಷ್ಟದ ಕೆಲಸವೇ? ಅದುವೇನಾದರೂ ರಾಕೆಟ್ ಸೈನ್ಸೇ? ಎಂದು ಪ್ರಶ್ನಿಸುವ ಮೂಲಕ ಅಧಿಕಾರಿಗಳ ಬೇಜವಾಬ್ದಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೇರೆ ರಾಜ್ಯಗಳಲ್ಲಿ ರಸ್ತೆಗಳು ಸುಸ್ಥಿತಿಯಲ್ಲಿರುವಾಗ ಬೆಂಗಳೂರಿನಲ್ಲಿ ಮಾತ್ರ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಕೇಳಿರುವ ಪ್ರಶ್ನೆ ಈಗ ನಗರದಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಇನ್ಮುಂದೆ ರಕ್ಷಣೆ ಇಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.
ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾದ ಗುಂಡಿ ಪುರಾಣ
ಸಚಿವರ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಕೃಷ್ಣ ಬೈರೇಗೌಡರು ಪರೋಕ್ಷವಾಗಿ ತಮ್ಮದೇ ಸರ್ಕಾರದ ನಿಕಟಪೂರ್ವ ಸಚಿವರು ಹಾಗೂ ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಪೋಲಾಗುತ್ತಿದೆಯೇ ಹೊರತು ವಾಸ್ತವದಲ್ಲಿ ರಸ್ತೆಗಳು ಸುಧಾರಣೆಯಾಗಿಲ್ಲ ಎಂಬುದು ವಿಪಕ್ಷಗಳ ಗಂಭೀರ ಆರೋಪವಾಗಿದೆ. ಸಚಿವರ ಆಂತರಿಕ ಅಸಮಾಧಾನವು ಸರ್ಕಾರದ ಒಳಗಿನ ಗೊಂದಲವನ್ನು ಹೊರಹಾಕಿದೆ ಎಂದು ಪ್ರತಿಪಕ್ಷದ ನಾಯಕರು ಟೀಕಿಸಿದ್ದಾರೆ.
ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಗುರುತಿಸಲಾಗಿದ್ದ 41,150 ರಸ್ತೆ ಗುಂಡಿಗಳ ಪೈಕಿ ಸುಮಾರು 39,887 ಗುಂಡಿಗಳನ್ನು ಮುಚ್ಚಲಾಗಿದೆ. ಇದಕ್ಕಾಗಿ 33.85 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಪ್ರತಿ ಮಳೆಗೆ ಹೊಸ ಗುಂಡಿಗಳು ಸೃಷ್ಟಿಯಾಗುತ್ತಿರುವುದು ಮತ್ತು ಹಳೆಯ ಗುಂಡಿಗಳು ಮತ್ತೆ ತೆರೆದುಕೊಳ್ಳುತ್ತಿರುವುದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತಿದೆ. ಬಿಡುಗಡೆಯಾದ ಅನುದಾನ ಸರಿಯಾದ ದಾರಿಯಲ್ಲಿ ಬಳಕೆಯಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿದೆ.
ಕೃಷ್ಣ ಬೈರೇಗೌಡರು ಕೇವಲ ಮಾತಿಗೆ ಸೀಮಿತವಾಗದೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಬೆಂಗಳೂರಿಗರ ಒತ್ತಾಯವಾಗಿದೆ. ಹಣದ ಲಭ್ಯತೆ ಇದ್ದರೂ ವ್ಯವಸ್ಥಿತವಾಗಿ ಕೆಲಸ ಯಾಕೆ ನಡೆಯುತ್ತಿಲ್ಲ ಎಂಬ ಪ್ರಶ್ನೆಗೆ ಸಚಿವರು ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಬೇಕಿದೆ.
ಇದರ ಭಾಗವಾಗಿ ರಾಜಧಾನಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಲು ಮುಂದಾಗಿರುವ ಸಚಿವ ಕೃಷ್ಣಭೈರೇಗೌಡ ಅವರ ದಿಢೀರ್ ಭೇಟಿಯ ಪರಿಣಾಮ ಇದೀಗ ‘ಮೊದಲ ವಿಕೆಟ್’ ಪತನವಾಗಿದೆ. ಕ್ರೆಸೆಂಟ್ ರಸ್ತೆಯ ಡಾಂಬರೀಕರಣದಲ್ಲಿ ಕಳಪೆ ಕಾಮಗಾರಿ ನಡೆಸಿದ್ದನ್ನು ಪತ್ತೆಹಚ್ಚಿದ ಸಚಿವರು, ಕರ್ತವ್ಯಲೋಪವೆಸಗಿದ ಅಧಿಕಾರಿಯನ್ನು ಅಮಾನತುಗೊಳಿಸಿ ಕಠಿಣ ಸಂದೇಶ ರವಾನಿಸಿದ್ದಾರೆ.
ಒಂದು ವೇಳೆ ಇವರ ಅವಧಿಯಲ್ಲಿ ಬೆಂಗಳೂರು ಗುಂಡಿ ಮುಕ್ತವಾದರೆ ಅದು ಅವರ ರಾಜಕೀಯ ಜೀವನದ ಅತಿದೊಡ್ಡ ಸಾಧನೆಯಾಗುವುದರಲ್ಲಿ ಸಂಶಯವಿಲ್ಲ. ಗಾರ್ಡನ್ ಸಿಟಿಯ ರಸ್ತೆಗಳು ಮತ್ತೆ ಸುಗಮ ಸಂಚಾರಕ್ಕೆ ಮುಕ್ತವಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.








