ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬ..! ಎಂಥವರನ್ನು ನಿಬ್ಬೆರಾಗಿಸುವಂತಹ ಸ್ಫೋಟಕ ಬ್ಯಾಟಿಂಗ್..!ಮೈದಾನದ ಮೂಲೆಮೂಲೆಗಳಲ್ಲಿ ಪಸರಿಸುತ್ತದೆ ಕ್ರಿಕೆಟ್ ಆಟದ ಅಸಲಿ ರಂಗು..! ಹೊಡಿಬಡಿ ಆಟಕ್ಕೂ ಜೈ, ಕೆಣಕಿದ್ರೆ
ಹೊಡೆದಾಟಕ್ಕೂ ಸೈ. ಸದಾ ಹಿರಿಯರಿಗೆ ಗೌರವ ಕೊಡುವ ಮುಗ್ಧ ಮನಸ್ಸಿನ ಮಗು..! ಅಪರಂಜಿತಯಂತ ಈ ಬಾಲಕ ಭವಿಷ್ಯದಲ್ಲಿ ಮತ್ತಷ್ಟು ಹೊಳೆಯಬೇಕಾದ್ರೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಶಿಸ್ತಿನ ಮೆರಗು.
ಬೌಂಡರಿ – ಸಿಕ್ಸರ್ ಹೊಡೆಯುವ ಆರಂಭದ ಗತ್ತು..! ಕ್ರೀಸ್‍ನಲ್ಲಿದ್ದಷ್ಟು ಸಮಯ ಎದುರಾಳಿ ತಂಡದ ಬೌಲರ್‍ಗಳಿಗೆ ಆಪತ್ತು..! ಬಾಲಸೂರ್ಯನ ರನ್ ಪ್ರಭಾವಳಿಯಂತೂ ಅಭಿಮಾನಿಗಳ ಪಾಲಿಗೆ ಗಮ್ಮತ್ತೋ ಗಮ್ಮತ್ತು..!
ವಿಶ್ವ ಕ್ರಿಕೆಟ್ ಅನ್ನು ತಲ್ಲಣಗೊಳಿಸುತ್ತಿದೆ ಈ ಪುಟಾಣಿ ಪೋರನ ತಾಕತ್ತು…! ಭವಿಷ್ಯದ ಟೀಮ್ ಇಂಡಿಯಾಗೆ ಈತನೇ ಸಂಪತ್ತು..! ಇಂತಹ ಪ್ರಂಚಡ ಬಾಲಕನನ್ನು ಬರಮಾಡಿಕೊಳ್ಳಲು ಕಾದು ಕುಳಿತಿದೆ ಕ್ರಿಕೆಟ್ ಜಗತ್ತು..!
ಹೌದು, ವಿಶ್ವ ಕ್ರಿಕೆಟ್‍ನಲ್ಲಿ ವೈಭವದ ದಿನಗಳನ್ನು ಎದುರು ನೋಡುತ್ತಿದ್ದಾನೆ ಪುಟಾಣಿ ವೈಭವ್ ಸೂರ್ಯವಂಶಿ. ಆದ್ರೆ ಅದ್ಭುತ ಅಪರೂಪದ ಪ್ರತಿಭೆಯನ್ನು ಜೋಪಾನವಾಗಿ ಲಾಲನೆ – ಪಾಲನೆ ಮಾಡಬೇಕಿದೆ. ಅಷ್ಟೇ ಅಲ್ಲ, ಅಹಂ, ಕೋಪ ಬಿಟ್ಟು ಕ್ರಿಕೆಟ್ ಆಟವನ್ನು ಮತ್ತಷ್ಟು ಸಿದ್ದಿಸಿಕೊಳ್ಳಲು ತಪಸ್ಸಿನಂತೆ ಪರಿಶ್ರಮಪಡಬೇಕು. ಕೈಯಲ್ಲಿ ಬ್ಯಾಟ್ ಇರುವುದು ಚೆಂಡನ್ನು ಹೊಡೆಯಲು. ಆದ್ರೆ ಎದುರಾಳಿ ಆಟಗಾರರಿಗೆ ಹೊಡೆಯುವುದಕ್ಕಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಸೋತಾಗ, ತಪ್ಪು ಮಾಡಿದಾಗ ಕಣ್ಣೀರು ಹಾಕುವುದಲ್ಲ. ಆತ್ಮವಿಶ್ವಾಸದಿಂದ ಮುನ್ನುಗ್ಗಿ ಮೌನವಾಗಿಯೇ ಉತ್ತರ ನೀಡಬೇಕು. ಇನ್ನು ಮುಂದೆ ಪ್ರತಿ ದಿನವೂ ಹೊಸ ಪಾಠವಾಗಿರುತ್ತದೆ. ಹೊಸ ಅನುಭವವಾಗಿರುತ್ತದೆ. ಹೊಸತನವನ್ನು ಪ್ರಯೋಗ ಮಾಡುತ್ತಲೇ ಇರಬೇಕು. ಆಟದ ವೈಖರಿ, ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು. ಆಗಲೇ ಸಿಗುವುದು ಕ್ರಿಕೆಟ್ ಜಗತ್ತಿನಲ್ಲಿ ಸ್ಥಾನಮಾನ ಎಂಬುದನ್ನು ಮರೆಯಬಾರದು. ಇದೀಗ ಐರ್ಲೆಂಡ್ ಮತ್ತು ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಟಿ-20 ಪಂದ್ಯಗಳು ವೈಭವ್ ಸೂರ್ಯವಂಶಿಗೆ ಟೆಸ್ಟಿಂಗ್ ಟೈಮ್.
ಯಾಕಂದ್ರೆ, ಟೀಮ್ ಇಂಡಿಯಾಗೆ ವೈಭವ್‍ನಂತಹ ಹಲವು ಪ್ರತಿಭೆಗಳು ಬಂದು ಹೋಗಿವೆ. ಆದ್ರೆ ದುಡ್ಡು – ಖ್ಯಾತಿಯ ಸುಳಿಯಲ್ಲಿ ಸಿಲುಕಿ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇವೆಲ್ಲಾ ಸೂರ್ಯವಂಶಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಆದ್ರೂ ಗೊತ್ತಿರಬೇಕು. ಕ್ರಿಕೆಟ್‍ನಲ್ಲಿ ಯಶಸ್ಸು ಸಾಧಿಸಲು ಬರೀ ಆಕ್ರಮಣಕಾರಿ ಪ್ರವೃತ್ತಿಯೇ ಮುಖ್ಯವಲ್ಲ. ಬದಲಾಗಿ ಶಿಸ್ತು ಮುಖ್ಯ. ಪರಿಶ್ರಮ, ಬದ್ದತೆ ಇರಬೇಕು. ಇದನ್ನು ಅರ್ಥಮಾಡಿಕೊಂಡ್ರೆ ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ಪ್ರಖರ ಸೂರ್ಯನಂತೆ ವಿಶ್ವ ಕ್ರಿಕೆಟ್‍ನಲ್ಲಿ ಕಂಗೋಳಿಸಬಹುದು..! ನೋಡೋಣ ಮುಂದೆ…!
ಸನತ್ ರೈ








