ಬಿಡದಿ ಟೌನ್ಶಿಪ್ ವಿಚಾರವಾಗಿ ಆರಂಭವಾದ ರಾಜಕೀಯ ಜಟಾಪಟಿ ಈಗ ವೈಯಕ್ತಿಕ ಸವಾಲು ಮತ್ತು ಪಂಥಾಹ್ವಾನಗಳ ಹಂತಕ್ಕೆ ತಲುಪಿದೆ. ಸಿಎಂ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ಭೂ ಕದನದ ನಡುವೆ ಈಗ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಶಿಡ್ಲಘಟ್ಟ ಶಾಸಕ ರವಿಕುಮಾರ್ ನಡುವೆ ಭಾರಿ ವಾಕ್ಸಮರ ನಡೆದಿದೆ. ಪ್ರದೀಪ್ ಈಶ್ವರ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಜೆಡಿಎಸ್ ಶಾಸಕ ರವಿಕುಮಾರ್, 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಭಯಾನಕ ಸವಾಲೊಂದನ್ನು ಎಸೆದಿದ್ದಾರೆ.
ನೀನು ಗೆದ್ದರೆ ನಾನು ವಾಚ್ಮನ್, ನೀನು ಸೋತರೆ ಹೆಚ್ಡಿಕೆಗೆ ಸಲ್ಯೂಟ್ ಹೊಡಿ
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ರವಿಕುಮಾರ್, ಪ್ರದೀಪ್ ಈಶ್ವರ್ ವಿರುದ್ಧ ಹರಿಹಾಯ್ದರು. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಏನಾದರೂ ಮತ್ತೆ ಗೆದ್ದರೆ, ನಾನು ರಾಜಕಾರಣವನ್ನೇ ಬಿಡುತ್ತೇನೆ. ಅಷ್ಟೇ ಅಲ್ಲ, ನಿನ್ನ ಮನೆ ಮುಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತೇನೆ ಎಂದು ಸವಾಲು ಹಾಕಿದರು. ಒಂದು ವೇಳೆ ನೀನು ಸೋತರೆ ಕುಮಾರಸ್ವಾಮಿ ಅವರ ಮನೆ ಮುಂದೆ ನಿಂತು ಸಲ್ಯೂಟ್ ಹೊಡೆಯಬೇಕು. ಗಂಡಸ್ತನವಿದ್ದರೆ ಈ ಸವಾಲನ್ನು ಸ್ವೀಕರಿಸು ಎಂದು ನೇರವಾಗಿಯೇ ಪಂಥಾಹ್ವಾನ ನೀಡಿದರು.
ಪ್ರದೀಪ್ ಈಶ್ವರ್ ಅವರ ಆಸ್ತಿ ಏರಿಕೆ ಬಗ್ಗೆ ಪ್ರಶ್ನಿಸಿದ ರವಿಕುಮಾರ್, ಶಾಸಕನಾಗುವ ಮೊದಲು ನಿನ್ನ ಆಸ್ತಿ ಎಷ್ಟಿತ್ತು ಮತ್ತು ಈಗ ಎಷ್ಟಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದರು. ಯಾವ ಇಲಾಖೆಯಿಂದ ಎಷ್ಟು ಲೂಟಿ ಹೊಡೆಯಲಾಗುತ್ತಿದೆ ಮತ್ತು ಕ್ರಷರ್ಗಳಿಂದ ಎಷ್ಟು ವಸೂಲಿ ಮಾಡಲಾಗುತ್ತಿದೆ ಎಂಬುದು ನಿನ್ನ ಕ್ಷೇತ್ರದಲ್ಲಿ ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಮಾತನಾಡಬೇಕಾದರೆ ಮೊದಲು ನಿನ್ನ ನಡವಳಿಕೆ ಸರಿಯಾಗಿರಲಿ ಎಂದು ಎಚ್ಚರಿಕೆ ನೀಡಿದರು.
ಸಿನಿಮಾ ಡೈಲಾಗ್ ಬಿಟ್ಟು ಅಭಿವೃದ್ಧಿ ಮಾಡು
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನೀನಲ್ಲ. 2023ರಲ್ಲಿ ನೀನು ಶಾಸಕನಾಗಲು ಜೆಡಿಎಸ್ ಕೂಡ ಒಂದು ಕಾರಣ ಎಂಬುದು ನಿನಗೆ ನೆನಪಿರಲಿ. ಬರೀ ಸಿನಿಮಾ ಡೈಲಾಗ್ ಹೊಡೆದು ಕಾಲಹರಣ ಮಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಮಾಡು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಒಟ್ಟಾಗಿ ನಿನ್ನನ್ನು ಸೋಲಿಸುವುದು ಖಚಿತ ಎಂದು ರವಿಕುಮಾರ್ ಗುಡುಗಿದರು.
ಒಬಿಸಿ ಕಾರ್ಡ್ ಪ್ಲೇ ಮಾಡುತ್ತಿರುವ ಶಾಸಕ
ಪ್ರದೀಪ್ ಈಶ್ವರ್ ಪದೇ ಪದೇ ನಾನು ಒಬಿಸಿ ಹುಡುಗ ಎಂದು ಹೇಳಿಕೊಳ್ಳುತ್ತಿರುವುದನ್ನು ಟೀಕಿಸಿದ ರವಿಕುಮಾರ್, ಅವರು ಬಲಿಜ ಸಮುದಾಯದ ಮುಖಂಡ ಎಂದು ಹೇಳಿಕೊಳ್ಳಲು ನಮಗೆ ಅನುಮಾನವಾಗುತ್ತಿದೆ. ಬಲಿಜ ಸಮುದಾಯದಲ್ಲಿ ಅನೇಕ ಸುಸಂಸ್ಕೃತ ನಾಯಕರಿದ್ದಾರೆ, ಆದರೆ ಪ್ರದೀಪ್ ಈಶ್ವರ್ ಅವರ ವರ್ತನೆ ಆ ಸಮುದಾಯಕ್ಕೆ ಗೌರವ ತರುವಂತಿಲ್ಲ. ಜೆಡಿಎಸ್ ಶಕ್ತಿ ಏನು ಎಂಬುದನ್ನು ತೋರಿಸುವ ಕಾಲ ಹತ್ತಿರದಲ್ಲಿದೆ ಎಂದು ಅವರು ಎಚ್ಚರಿಸಿದರು. ಸದ್ಯ ಶಿಡ್ಲಘಟ್ಟ ಶಾಸಕರ ಈ ಸೆಕ್ಯೂರಿಟಿ ಗಾರ್ಡ್ ಸವಾಲು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.








