ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು, ವಿಡಿಯೋ ಮತ್ತು ಫೋಟೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮತದಾರರ ಪಟ್ಟಿಯಲ್ಲಿ ಅಕ್ರಮ: ಹೆಚ್ ಡಿ ಕೆ ಬಾಂಬ್
ರಾಮನಗರದಲ್ಲಿ ಆರಂಭವಾದ ಎಸ್ ಐ ಆರ್ ಪ್ರಕ್ರಿಯೆಯ ಅಕ್ರಮದ ಸರಣಿ ಈಗ ಯಶವಂತಪುರ ಕ್ಷೇತ್ರಕ್ಕೂ ವ್ಯಾಪಿಸಿದೆ. ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಭಾವಚಿತ್ರವಿರುವ ಪುಸ್ತಕಗಳನ್ನು ಬಿಎಲ್ ಓಗಳು ಹಿಡಿದುಕೊಂಡಿರುವ ಫೋಟೋಗಳನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಸರ್ಕಾರದ ಗುಲಾಮರಂತೆ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಮಮಂದಿರದ ಹುಂಡಿ ಲೂಟಿ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ಈಗ ಅಧಿಕಾರಿಗಳ ಮೂಲಕ ಮತದಾರರ ಹುಂಡಿಯನ್ನೇ ಲೂಟಿ ಮಾಡಲು ಹೊರಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಹಲವು ಭಾಗಗಳಿಂದ ಈ ಬಗ್ಗೆ ದೂರುಗಳು ಬರುತ್ತಿದ್ದು, ಕೂಡಲೇ ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ನೀಡುವುದಾಗಿ ತಿಳಿಸಿದರು.
ರೈತರ ಹಿತ ಬಲಿಗೊಡುತ್ತಿರುವ ಸರ್ಕಾರ
ಕೃಷಿ ಮತ್ತು ನೀರಾವರಿ ವಿಚಾರದಲ್ಲೂ ರಾಜ್ಯ ಸರ್ಕಾರದ ನಡೆಯನ್ನು ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದರು. ಜಲಾಶಯಗಳನ್ನು ನಂಬಿ ರೈತರು ಬೆಳೆ ಬೆಳೆಯಬೇಡಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಕಿಡಿಕಾರಿದ ಅವರು, ರಾಜ್ಯದ ಇತಿಹಾಸದಲ್ಲಿ ಇಂತಹ ಬೇಜವಾಬ್ದಾರಿ ಸಂದೇಶ ನೀಡಿದ ಮೊದಲ ಸರ್ಕಾರ ಇದಾಗಿದೆ ಎಂದು ಹರಿಹಾಯ್ದರು. ಜಲಾಶಯಗಳನ್ನು ನಂಬದೆ ರೈತರು ಇನ್ನಾರನ್ನು ನಂಬಬೇಕು ಎಂದು ಪ್ರಶ್ನಿಸಿದ ಅವರು, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಅವರನ್ನು ದೃತಿಗೆಡಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣದ ಬಗ್ಗೆ ಕೇವಲ ಮಾತುಗಳನ್ನು ಆಡಲಾಗುತ್ತಿದೆ. ತಮಿಳುನಾಡಿನವರು ಒಂದು ಇಟ್ಟಿಗೆ ಇಡಲು ಬಿಡುವುದಿಲ್ಲ ಎನ್ನುತ್ತಿದ್ದಾರೆ, ಆದರೆ ನಮ್ಮ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಎತ್ತಿನಹೊಳೆ ಯೋಜನೆಗೆ ಈವರೆಗೆ 23 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಜೂನ್ ಜುಲೈನಲ್ಲಿ ನೀರು ಹರಿಸುತ್ತೇವೆ ಎಂದು ಹೇಳುವ ಕಾಂಗ್ರೆಸ್ ನಾಯಕರು, ರೈತರಿಗೆ ಮಾತ್ರ ಯಾವುದೇ ಪ್ರಯೋಜನ ನೀಡುತ್ತಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಹಣ ವ್ಯಯವಾದರೂ ಫಲಿತಾಂಶ ಶೂನ್ಯವಾಗಿದೆ ಎಂದು ಕುಮಾರಸ್ವಾಮಿ ಗುಡುಗಿದರು.
ಮತದಾರರ ಪಟ್ಟಿ ಅಕ್ರಮ ಮತ್ತು ರೈತರ ಸಮಸ್ಯೆಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಅವರು ಸಮರ ಸಾರಿದ್ದು, ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.








