ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಸದಾ ಕಾಲ ಸುದ್ದಿಯಲ್ಲಿರಬೇಕು ಎನ್ನುವ ಹಪಹಪಿಯಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇಜವಾಬ್ದಾರಿಯುತವಾಗಿ ಮಾತನಾಡುತ್ತಿದ್ದಾರೆ. ಅವರೊಬ್ಬ ಹುಚ್ಚನಂತೆ ವರ್ತಿಸುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಆನೆಗೊಂದಿ ಗ್ರಾಮದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ಅವರು ತಮ್ಮ ಅಜ್ಞಾನ ಪ್ರದರ್ಶಿಸುತ್ತಿದ್ದಾರೆ. ಆರ್‌ಎಸ್‌ಎಸ್ ಎನ್ನುವುದು ಅಲುಗಾಡಿಸಲು ಅಸಾಧ್ಯವಾದ ಬೃಹತ್ ಶಕ್ತಿಯಾಗಿದೆ. ಹಿಂದೆ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ಸ್ವತಃ ಪ್ರಿಯಾಂಕ್ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಈ ಸಂಘಟನೆಯನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ. ಅಂತಹದರಲ್ಲಿ ಈ ಪ್ರಿಯಾಂಕ್ ಖರ್ಗೆಯಿಂದ ಆರ್‌ಎಸ್‌ಎಸ್ ಅಲುಗಾಡಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ಸಚಿವರ ಮಾನಸಿಕ ಸ್ಥಿತಿಯ ಬಗ್ಗೆ ಲೇವಡಿ ಮಾಡಿದ ರೆಡ್ಡಿ, ಪ್ರಿಯಾಂಕ್ ಖರ್ಗೆ ಮೊದಲು ಆಸ್ಪತ್ರೆಗೆ ಹೋಗಿ ತಲೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸದಾ ಕಾಲ ಯಾವುದಾದರೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರಬೇಕು ಎನ್ನುವ ಹುಚ್ಚು ಅವರಿಗೆ ಹಿಡಿದಿದೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನದ ಜವಾಬ್ದಾರಿ ನೀಡಿ ಮುಖ್ಯಮಂತ್ರಿಗಳು ಆ ಹುದ್ದೆಯ ಮೌಲ್ಯವನ್ನೇ ಕುಗ್ಗಿಸಿದ್ದಾರೆ ಎಂದು ಕಿಡಿಕಾರಿದರು.
ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇರಕಲ್ಲಗಡ, ಕಿನ್ನಾಳ ಹಾಗೂ ವೆಂಕಟಗಿರಿ ಭಾಗಗಳಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.








