💥 * ಅಂದು ಗ್ರೆಗ್ ಚಾಪೆಲ್ ರಿಂಗ್ ಮಾಸ್ಟರ್..! ಇಂದು ಗಂಭೀರ್ ಡಿಕ್ಟೇಟರ್..? 🚨
* ಟೀಮ್ ಇಂಡಿಯಾದ ಭವಿಷ್ಯವನ್ನು ಹಾಳು ಮಾಡುತ್ತಿರುವ ಸ್ಯಾಡಿಸ್ಟ್‍ಗಳು ಯಾರು..? 👿
* ಟೀಮ್ ಇಂಡಿಯಾದ ಗರ್ಭಗುಡಿಯಲ್ಲಿ ಯಾವ ಯಾವ ವಿಷಪೂರಿತ ಹಾವುಗಳಿವೆ..? 🐍
=======
ಗೌತಮ್ ಗಂಭೀರ್..!
ಒಬ್ಬ ಆಟಗಾರನಾಗಿ, ದೇಶ, ತಂಡ, ಗೆಲುವಿನ ವಿಚಾರದಲ್ಲಿ ಎಂದೆಂದಿಗೂ ತಲೆಬಾಗುವ ಮನುಷ್ಯನೇ ಅಲ್ಲ. ಆತನ ಮೇಲೆ ಎಷ್ಟೇ ಸಿಟ್ಟು, ಕೋಪವಿದ್ರೂ ಈ ವಿಷ್ಯಗಳನ್ನು ಒಪ್ಪಿಕೊಳ್ಳಲೇಬೇಕು. ಯಾಕಂದ್ರೆ ಗಂಭೀರ್‍ನ ಗಂಭೀರವಾದ ಮಹೋನ್ನತವಾದ ಇನಿಂಗ್ಸ್‍ಗಳನ್ನು ಭಾರತೀಯ ಕ್ರಿಕೆಟ್ ಎಂದಿಗೂ ಮರೆಯೋಕೆ ಸಾಧ್ಯವಿಲ್ಲ.
ಅದು 2007ರ ಚೊಚ್ಚಲ ಟಿ-20 ವಿಶ್ವಕಪ್ ಫೈನಲ್ ಆಗಿರಬಹುದು, .2011 ಏಕದಿನ ವಿಶ್ವಕಪ್‍ನ ಫೈನಲ್ ಪಂದ್ಯವೇ ಆಗಿರಬಹುದು. ಟೀಮ್ ಇಂಡಿಯಾದ ಗೆಲುವಿನ ಯಶಸ್ಸಿನಲ್ಲಿ ಗಂಭೀರ್ ಕೊಡುಗೆ ಅನನ್ಯ. ಮುಖದಲ್ಲಿ ಕೆಂಡಕಾರುತ್ತಲೇ ಆಡುವ, ಆ ಹೋರಾಟದ ಮನೋಭಾವನೆಯ ಬಗ್ಗೆ ಎರಡು ಮಾತಿಲ್ಲ. .
ಟೀಮ್ ಇಂಡಿಯಾದ ಮಾರ್ಗದರ್ಶಕನೋ..? ಸರ್ವಾಧಿಕಾರಿಯೋ..?
ಒಬ್ಬ ತರಬೇತುದಾರನಾಗಿ ಗೌತಮ್ ಗಂಭೀರ್ ಸಂಪೂರ್ಣ ವಿಫಲರಾಗಿದ್ದಾರೆ. ಅದೇ ಸಿಡುಕು ಮುಖ. ಹಠಮಾರಿ ವರ್ತನೆ. ತಪ್ಪುಗಳನ್ನು ಒಪ್ಪಿಕೊಳ್ಳದ ಮನಸ್ಥಿತಿ, ಅಹಂಕಾರದ ಮಾತುಗಳು. ಆಟಗಾರರ ಜೊತೆಗೆ ಅಂತರ ಕಾಯ್ದುಕೊಳ್ಳುವುದು. ಒಂದು ರೀತಿಯಲ್ಲಿ ಸರ್ವಾಧಿಕಾರಿ ಧೋರಣೆ. ಹೀಗಾಗಿ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್‍ನಲ್ಲಿ ಹಿತವಾದ ವಾತಾವರಣವಿಲ್ಲ. ಮನೆಯೊಂದು ಮೂರು ಬಾಗಿಲು ಅಲ್ಲ ಹಲವು ಬಾಗಿಲುಗಳಾಗಿವೆ..!
ಚಾಪೆಲ್ ನಂತ್ರ ಟೀಮ್ ಇಂಡಿಯಾದ ಸ್ಯಾಡಿಸ್ಟ್ ಕೋಚ್ ಗಂಭೀರ್..?
ಮೂರು ಪ್ರತಿಷ್ಠಿತ ಪ್ರಶಸ್ತಿ ಗೆದ್ರೂ, ಕಳೆದ 20 ವರ್ಷಗಳಲ್ಲಿ ಟೀಮ್ ಇಂಡಿಯಾ ಕಂಡ ಅತ್ಯಂತ ಸ್ಯಾಡಿಸ್ಟ್ ಹೆಡ್ ಕೋಚ್ ಎಂಬ ಕುಖ್ಯಾತಿ ಗಂಭೀರ್ ಹೆಸರಿಗೆ ಅಂಟಿಕೊಳ್ಳುತ್ತಿದೆ. ನಿಜ, ಗಂಭೀರ್ ಮಾರ್ಗದರ್ಶನದಲ್ಲಿ 2025ರ ಏಷ್ಯಾಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2026ರ ಟಿ-20 ವಿಶ್ವಕಪ್ ಟೂರ್ನಿಗಳನ್ನು ಗೆದ್ದಿರಬಹುದು.
ಆದ್ರೆ ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಇಲ್ಲಿವಯರೆಗೆ ಗೆದ್ದಿರುವುದಕ್ಕಿಂತ ಸೋತಿರುವುದೇ ಹೆಚ್ಚು. ಆದ್ರೂ ಸೋಲುಗಳನ್ನು ಒಪ್ಪಿಕೊಳ್ಳಲು ಕೂಡ ರೆಡಿ ಇಲ್ಲ. ಪ್ರತಿಯೊಂದಕ್ಕೆ ಸಮರ್ಥನೆಗಳು ಇದ್ದೇ ಇರುತ್ತವೆ. ಹಾಗಂತ ಸಮರ್ಥನೆ ಕೊಡುವುದು ತಪ್ಪು ಅಂತ ಹೇಳುತ್ತಿಲ್ಲ. ಎಲ್ಲದಕ್ಕೂ ಇತಿಮಿಗಳಿರುತ್ತವೆ ಅಲ್ವಾ.?
ಗಂಭೀರ್‍ನ ಗಂಭೀರ ಸರಣಿಗಳು ಸೋಲುಗಳು..! 🤬
ಅದರಲ್ಲೂ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ ವೈಟ್‍ವಾಶ್, 27 ವರ್ಷಗಳ ನಂತರ ಲಂಕಾದಲ್ಲಿ ಏಕದಿನ ಸರಣಿಯ ಸೋಲುಗಳನ್ನು ಒಂದು ಹಂತದಲ್ಲಿ ಅಭಿಮಾನಿಗಳು ಸಹಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ನಡೆದ ಐರ್ಲೆಂಡ್ ಮತ್ತು ಇಂಗ್ಲೆಂಡ್‍ನಲ್ಲಿ ಮಹಾ ಮಂಗಳಾರತಿ ಮಾಡಿಕೊಂಡಿರುವುದನ್ನು ಅಭಿಮಾನಿಗಳು ಖಂಡಿತವಾಗಿಯೂ ಸಹಿಸಿಕೊಳ್ಳುತ್ತಿಲ್ಲ. ಇಲ್ಲಿ ಮುಖ್ಯವಾಗಿ ಸೋಲು – ಗೆಲುವಿನ ಪ್ರಶ್ನೆ ಬರಲ್ಲ. ಇಲ್ಲಿ ಗಂಭೀರ್ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿ, ವರ್ಕ್‍ಔಟ್ ಆಗದ ಗೇಮ್ ಪ್ಲಾನ್‍ಗಳು, ಅರ್ಥವಾಗದ ಪ್ರಯೋಗಗಳು, ಹೊಂದಾಣಿಕೆಯ ಕೊರತೆ, ಟೀಮ್ ಇಂಡಿಯಾದ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ.
ಗ್ರೆಗ್ ಚಾಪೆಲ್ ತಂತ್ರದ ಹಾದಿಯಲ್ಲಿ ಗೌತಮ್ ಗಂಭೀರ್..?
ಗಂಭೀರ್ ಬಲಿಷ್ಠ ಟೀಮ್ ಇಂಡಿಯಾವನ್ನು ದುರ್ಬಲ ಟೀಮ್ ಇಂಡಿಯಾ ಮಾಡುತ್ತಿದ್ದಾರೆ ಎಂಬ ಆರೋಪಗಳು ಜೋರಾಗಿ ಕೇಳಿಬರುತ್ತಿವೆ. ಈ ಹಿಂದೆ ಗ್ರೆಗ್ ಚಾಪೆಲ್ ಕೂಡ ಮಾಡಿದ್ದು ಇದನ್ನೇ. ದ್ರಾವಿಡ್‍ನನ್ನು ಮುಂದಿಟ್ಟುಕೊಂಡು, ಗಂಗೂಲಿ ಮತ್ತು ಸಚಿನ್‍ಗೆ ಸೈಡ್ ಲೈನ್ ಮಾಡಿದ್ದರು. ಹಾಗೇ ಇವತ್ತು, ಗಂಭೀರ್, ಗಿಲ್, ಸ್ಕೈ, ಅಯ್ಯರ್‍ನನ್ನು ಮಂದಿಟ್ಟುಕೊಂಡು ರೋಹಿತ್ ಮತ್ತು ವಿರಾಟ್ ರನ್ನು ಈಗಾಗಲೇ ಟೆಸ್ಟ್ ತಂಡದಿಂದ ಹೊರದಬ್ಬಿದ್ದಾರೆ. ಇದೀಗ ಏಕದಿನ ತಂಡದಿಂದಲೂ ಹೊರಹಾಕುವ ಲೆಕ್ಕಚಾರದಲ್ಲಿದ್ದಾರೆ.
ಅಂದು ಚಾಪೆಲ್ ರಿಂಗ್ ಮಾಸ್ಟರ್..! ಇಂದು ಗಂಭೀರ್ ಡಿಕ್ಟೇಟರ್..?
ಮೇಲ್ನೋಟಕ್ಕೆ ಚಾಪೆಲ್ ಮತ್ತು ಗಂಭೀರ್ ನಡೆಯನ್ನು ಗಮನಿಸಿದಾಗ ಒಂದೇ ನಾಣ್ಯದ ಎರಡು ಮುಖಗಳ ಹಾಗೆ ಕಾಣುತ್ತಿದೆ.
ಈ ಹಿಂದೆ ಗ್ರೆಗ್ ಚಾಪೆಲ್ ಟೀಮ್ ಇಂಡಿಯಾವನ್ನು 2007ರ ವಿಶ್ವಕಪ್‍ನಲ್ಲಿ ಮಣ್ಣುಮುಕ್ಕಿಸಿದ್ರು. ಹಿರಿಯ ಆಟಗಾರರೊಂದಿಗೆ ಭಿನ್ನಾಭಿಪ್ರಾಯ, ಅನಗತ್ಯ ಪ್ರಯೋಗಗಳನ್ನು ಮಾಡಿದ್ರು. ಹೀಗಾಗಿ ಟೀಮ್ ಇಂಡಿಯಾ ಸೋತಾಗ ಕುಪಿತಗೊಂಡ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರರ ಫೋಟೋಗಳಿಗೆ ಬೆಂಕಿ ಹಾಕಿದ್ರು. ಆಟಗಾರರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ರು. ಇದು ಮರೆತು ಹೋಗಿದ್ರೂ ಮತ್ತೆ ಮತ್ತೆ ನೆನಪಾಗಿ ಆತಂಕವೂ ಮೂಡುತ್ತಿದೆ. ಯಾಕಂದ್ರೆ, ಟೀಮ್ ಮ್ ಇಂಡಿಯಾದ ಸದ್ಯದ ಪರಿಸ್ಥಿತಿಯೂ ಅದೇ ರೀತಿ ಇದೆ.
ದೊಡ್ಡಣ್ಣ ಬಿಸಿಸಿಐ ಯಾಕೆ ಮೌನಕ್ಕೆ ಶರಣಾಗಿದೆ..? 🤫
ಹೌದು, ಸೋತ್ರೂ ಗೆದ್ರೂ ಟೀಮ್ ಇಂಡಿಯಾ ಎಂಬ ಬ್ರ್ಯಾಂಡ್ ಬಿಸಿಸಿಯನ್ನು ಭ್ರಮೆಯಲ್ಲಿ ತೇಲಾಡುವಂತೆ ಮಾಡಿದೆ. ಏನು ಮಾಡಿದ್ರೂ ನಡೆಯುತ್ತೆ ಎಂಬ ಧೋರಣೆಯಲ್ಲಿದೆ. ಟೀಮ್ ಇಂಡಿಯಾದ ಭವಿಷ್ಯವನ್ನು ಅಜಿತ್ ಅಗರ್ಕರ್ ಮತ್ತು ಗಂಭೀರ್ ಕೈಗೆ ಕೊಟ್ಟು, ದುಡ್ಡು ಮಾಡುವುದು ಹೇಗೆ ಎಂಬ ಯೋಚನೆಯಲ್ಲೇ ಇದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಟೀಮ್ ಇಂಡಿಯಾದ ಇತ್ತೀಚಿನ ಕಳಪೆ ಪ್ರದರ್ಶನಗಳ ಬಗ್ಗೆ ಮೌನಕ್ಕೆ ಶರಣಾಗಿರುವುದು ಅಚ್ಚರಿಯನ್ನುಂಟು ಮಾಡುತ್ತಿದೆ.
ಮೇಜರ್ ಆಪರೇಷನ್ ಟೀಮ್ ಇಂಡಿಯಾ ಆಗಬೇಕಾ..? ಬೇಡ್ವಾ..?
ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಮೇಜರ್ ಆಪರೇಷನ್ ಆಗಲೇಬೇಕಿದೆ. ಟೀಮ್ ಇಂಡಿಯಾವನ್ನು ಹಾಳು ಮಾಡುತ್ತಿರುವ ಕೀಟಾಣುಗಳನ್ನು ಹೊರ ಹಾಕಲೇಬೇಕು. ತಂಡದಲ್ಲಿರುವ ವಿಷಪೂರಿತ ಹಾವುಗಳ ವಿಷ ತೆಗೆಯಲು ಮತ್ತೆ ದೇಸಿ ನೆಲಕ್ಕೆ ಬಿಡಬೇಕು. ಇಲ್ಲ ಅಂದ್ರೆ 2007ರ ಪರಿಸ್ಥಿತಿ ಮತ್ತೆ ಪುನಾರಾವರ್ತನೆಯಾಗುವುದು ಖಚಿತ..!
ಟೀಮ್ ಇಂಡಿಯಾದಲ್ಲಿ ಬದಲಾವಣೆ ಬೇಕಾ..? ಬೇಡ್ವಾ..?🤔
ನಿಮ್ಮ ಅಭಿಪ್ರಾಯವೇನು..?👇
ಸನತ್ ರೈ








