ವಾಷಿಂಗ್ಟನ್: ತನ್ನ ವಿರುದ್ಧ ಹತ್ಯೆ ಅಥವಾ ಹತ್ಯೆಗೆ ಸಣ್ಣ ಪ್ರಯತ್ನ ನಡೆದರೂ ಇರಾನ್ ದೇಶವನ್ನು ಸಂಪೂರ್ಣವಾಗಿ ನಾಶಮಾಡಿ ಧ್ವಂಸಗೊಳಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿರುವ ಕುರಿತು ಗಂಭೀರ ಆರೋಪ ಮಾಡಿರುವ ಅವರು, ಇರಾನ್ ವಿರುದ್ಧ ನೇರ ಯುದ್ಧದ ಘೋಷಣೆ ಮಾಡಿದ್ದಾರೆ.
ಟ್ರೂತ್ ಸೋಷಿಯಲ್ ಜಾಲತಾಣದಲ್ಲಿ ಈ ಕುರಿತು ಪ್ರಬಲ ಪೋಸ್ಟ್ ಹಂಚಿಕೊಂಡಿರುವ ಅಧ್ಯಕ್ಷ ಟ್ರಂಪ್, ಇರಾನ್ ಸರ್ಕಾರಕ್ಕೆ ಅಮೆರಿಕದ ಸೇನಾ ಶಕ್ತಿಯ ಭಯಾನಕ ದರ್ಶನ ಮಾಡಿಸಿದ್ದಾರೆ. ಅಲ್ ಜಜೀರಾ ವರದಿಯ ಪ್ರಕಾರ ಟ್ರಂಪ್ ಅವರ ಹೇಳಿಕೆಯ ಮುಖ್ಯಾಂಶಗಳು ಇಲ್ಲಿವೆ:
ಸಜ್ಜಾಗಿವೆ ಸಾವಿರಾರು ಕ್ಷಿಪಣಿಗಳು
ನನ್ನ ಹತ್ಯೆಯ ಸಂಚು ರೂಪಿಸಿದರೆ ಅಮೆರಿಕ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಈಗಾಗಲೇ ಸಾವಿರಕ್ಕೂ ಹೆಚ್ಚು ಕ್ಷಿಪಣಿಗಳನ್ನು ಇರಾನ್ ನ ಪ್ರಮುಖ ನೆಲೆಗಳ ಮೇಲೆ ಗುರಿ ನಿಗದಿಪಡಿಸಿ ಸಜ್ಜುಗೊಳಿಸಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸರ್ಕಾರವು ಅಮೆರಿಕದ ಅಧ್ಯಕ್ಷರನ್ನು ಗುರಿಯಾಗಿಸಿಕೊಂಡರೆ ಅಥವಾ ನನ್ನ ಹತ್ಯೆಗೆ ಯತ್ನಿಸಿದರೆ, ತಕ್ಷಣವೇ ಸಾವಿರಾರು ಕ್ಷಿಪಣಿಗಳನ್ನು ಉಡಾಯಿಸಿ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.
ಒಂದು ವರ್ಷದಲ್ಲಿ ಇರಾನ್ ಅಂತ್ಯ
ಈಗಾಗಲೇ ಸೇನೆಗೆ ಈ ಕುರಿತು ಅಧ್ಯಕ್ಷೀಯ ಆದೇಶಗಳನ್ನು ನೀಡಲಾಗಿದೆ ಎಂದು ಹೇಳಿರುವ ಟ್ರಂಪ್, ಅಮೆರಿಕದ ಸೇನೆಯು ಕೇವಲ ಒಂದು ವರ್ಷದ ಅವಧಿಯಲ್ಲಿ ಇರಾನ್ ನ ಪ್ರತಿಯೊಂದು ಪ್ರದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಸನ್ನದ್ಧವಾಗಿದೆ. ಅಮೆರಿಕ ಅಂತಹ ಬಲಿಷ್ಠ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಎಚ್ಚರಿಸಿದ್ದಾರೆ.
ನಿರಂತರ ಹತ್ಯೆಯ ಬೆದರಿಕೆ
ಇರಾನ್ ನಿಂದ ತಮ್ಮ ಜೀವಕ್ಕೆ ಸಂಚಕಾರವಿದೆ ಎಂಬ ಆರೋಪವನ್ನು ಅಧ್ಯಕ್ಷ ಟ್ರಂಪ್ ಈ ಹಿಂದೆಯೂ ಹಲವು ಬಾರಿ ಮಾಡಿದ್ದರು. ಇರಾನ್ ಬೆಂಬಲಿತ ಗುಂಪುಗಳು ಜಗತ್ತಿನಾದ್ಯಂತ ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತಿವೆ ಮತ್ತು ಸದ್ಯ ಅಮೆರಿಕದ ಅಧ್ಯಕ್ಷರನ್ನೇ ಗುರಿಯಾಗಿಸಿಕೊಂಡಿವೆ ಎಂಬುದು ಟ್ರಂಪ್ ಅವರ ಬಲವಾದ ವಾದವಾಗಿದೆ.
ಈ ಎಚ್ಚರಿಕೆಯು ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಧ್ಯಕ್ಷ ಟ್ರಂಪ್ ಅವರ ಈ ಆಕ್ರಮಣಕಾರಿ ಹೇಳಿಕೆಯು ಇರಾನ್ ನ ಮುಂದಿನ ನಡೆಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.








