ಕೇವಲ 28 ರಿಂದ 30 ಶಾಸಕರನ್ನು ಇಟ್ಟುಕೊಂಡು ಆಪರೇಷನ್ ಕಮಲದ ಮೂಲಕ ಅನಿರೀಕ್ಷಿತವಾಗಿ ಅಧಿಕಾರ ಹಿಡಿದ ಇತಿಹಾಸ ಕುಮಾರಸ್ವಾಮಿ ಅವರದ್ದು ಎಂದು ಸಚಿವ ಎನ್ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. 136 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ ರಾಜ್ಯದ 7 ಕೋಟಿ ಜನರ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಒಪ್ಪಲು ಸಾಧ್ಯವಿಲ್ಲ ಎನ್ನುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಅವರ ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಸಿದ ಸಚಿವರು ಮಿಸ್ಟರ್ ಕುಮಾರಸ್ವಾಮಿ ಎಂದು ಕರೆಯುವುದು ನಮಗೂ ಗೊತ್ತು ಆದರೆ ಸೌಜನ್ಯಕ್ಕಾಗಿ ಸುಮ್ಮನಿದ್ದೇವೆ ಎಂದಿದ್ದಾರೆ. ಇದು ಅವರ ಮೂರ್ಖತನದ ಪರಮಾವಧಿ ಎಂದು ಟೀಕಿಸಿದ್ದಾರೆ. 2006ರಲ್ಲಿ ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ಅಧಿಕೃತ ನಾಯಕರಾಗದಿದ್ದರೂ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದ್ದು ನಾವು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು. ರಾಜ್ಯದಲ್ಲಿ ಅಸಂವಿಧಾನಿಕವಾಗಿ ಆಪರೇಷನ್ ಕಮಲಕ್ಕೆ ನಾಂದಿ ಹಾಡಿದ್ದೇ ಕುಮಾರಸ್ವಾಮಿ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಹಿಂದೆ ಎಸ್ ಎಂ ಕೃಷ್ಣ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ಸಹಿಸದ ಕುಮಾರಸ್ವಾಮಿ ಅವರು ಈಗ ಮತ್ತೊಬ್ಬ ಒಕ್ಕಲಿಗ ನಾಯಕ ಡಿ ಕೆ ಶಿವಕುಮಾರ್ ಬೆಳೆಯುತ್ತಿರುವುದನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರು ಇಷ್ಟೆಲ್ಲಾ ಟೀಕೆಗಳ ನಡುವೆಯೂ ಕುಮಾರಸ್ವಾಮಿ ಅವರನ್ನು ಅಣ್ಣ ಎಂದು ಗೌರವದಿಂದ ಕರೆಯುವ ಸೌಜನ್ಯ ತೋರಿದ್ದಾರೆ ಅದನ್ನು ನೋಡಿಯಾದರೂ ಇವರು ಸಂಸ್ಕಾರ ಕಲಿಯಲಿ ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಹಿಂದೆ ಆರ್ಎಸ್ಎಸ್ ಮತ್ತು ಪ್ರಧಾನಿ ಮೋದಿಯವರನ್ನು ತೀವ್ರವಾಗಿ ನಿಂದಿಸಿದ್ದ ಕುಮಾರಸ್ವಾಮಿ ಇಂದು ಕೇವಲ ಕೇಂದ್ರ ಸಂಪುಟ ಪುನಾರಚನೆಯಾದರೆ ತಮ್ಮ ಮಂತ್ರಿ ಸ್ಥಾನ ಎಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭಯದಿಂದ ಬಿಜೆಪಿ ಮತ್ತು ಆರ್ಎಸ್ಎಸ್ ಗುಣಗಾನ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕೊನೆಯಲ್ಲಿ ಕುಮಾರಸ್ವಾಮಿ ಅವರಿಗೆ ಮುಕ್ತ ಸವಾಲು ಹಾಕಿದ ಸಚಿವರು ನಿಮಗೆ ನಿಜವಾಗಿಯೂ ಸ್ವಾಭಿಮಾನವಿದ್ದರೆ ತಕ್ಷಣವೇ ಬಿಜೆಪಿ ಮೈತ್ರಿಯಿಂದ ಹೊರಬಂದು ನೇರವಾಗಿ ನಮ್ಮೊಂದಿಗೆ ಕಡೇ ಆಟ ಆಡಿ ನೋಡಿ ಎಂದು ತೊಡೆ ತಟ್ಟಿದ್ದಾರೆ. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ನಿಶ್ಚಿತ ಎಂದು ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.








