ಸೆಪ್ಟಂಬರ್ 26ರಿಂದ ನವೆಂಬರ್ 6ರವರೆಗೆ ಯುಎಇನಲ್ಲಿ ಐಪಿಎಲ್ ಟೂರ್ನಿ ?
13ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿ ಸೆಪ್ಟಂಬರ್ 26ರಿಂದ ಆರಂಭವಾಗುತ್ತಿದೆಯಾ ? ಫೈನಲ್ ಪಂದ್ಯ ನವೆಂಬರ್ 6ರಂದು ನಡೆಯಲಿದೆಯಾ ? ಹೀಗೊಂದು ಸುದ್ದಿ ಈಗ ಹರಿದಾಡುತ್ತಿದೆ. ಶುಕ್ರವಾರ ನಡೆದ ಬಿಸಿಸಿಐ ಅಪೆಕ್ಸ್ ಸಭೆಯಲ್ಲಿ ಐಸಿಸಿ ಟೂರ್ನಿಯನ್ನು ಯುಎಇ ನಲ್ಲಿ ಆಯೋಜಿಸುವ ಬಗ್ಗೆ ಚರ್ಚೆ ಮಾಡಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಟೂರ್ನಿಯನ್ನು ಆಯೋಜನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಯುಎಇನಲ್ಲಿ ಟೂರ್ನಿಯನ್ನು ಆಯೋಜನೆ ಮಾಡುವುದಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆಯಂತೆ. ಆದ್ರೆ ಯಾವುದಕ್ಕೂ ಐಸಿಸಿಯ ವಿಶ್ವಕಪ್ ಟೂರ್ನಿಯ ಮೇಲೆ ಅವಲಂಬಿತವಾಗಿದೆ.
ಐಸಿಸಿಯ ನಿರ್ಧಾರದ ಬಳಿಕ ಬಿಸಿಸಿಐ -ಐಪಿಎಲ್ ಗವರ್ನಿಂಗ್ ಕಮಿಟಿ 2020ರ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ನಿಗದಿಪಡಿಸಲಿದೆ. ಇನ್ನು ಟೀಮ್ ಇಂಡಿಯಾ ಆಟಗಾರರ ಅಭ್ಯಾಸಕ್ಕಾಗಿ ಮೂರು ತಾಣಗಳನ್ನು ಆಯ್ಕೆ ಮಾಡಲಾಗಿದೆ.
ಧರ್ಮಶಾಲಾ, ಅಹಮದಾಬಾದ್ ಮತ್ತು ದುಬೈನಲ್ಲಿ ಆಟಗಾರರು ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಅಭ್ಯಾಸ ನಡೆಸಬೇಕಾಗುತ್ತದೆ.
ಒಂದು ಮೂಲದ ಪ್ರಕಾರ ಈಗಾಗಲೇ ಐಪಿಎಲ್ ಫ್ರಾಂಚೈಸಿಗಳು ತಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ದುಬೈನಲ್ಲಿ ಹೊಟೇಲ್ ನಲ್ಲಿ ಕ್ವಾರಂಟೈನ್ ಆಗಿ ಅಲ್ಲಿ ಅಭ್ಯಾಸ ನಡೆಸಲು ಪೂರ್ವ ತಯಾರಿ ಕೂಡ ಮಾಡಿಕೊಳ್ಳುತ್ತಿವೆ. ಅಲ್ಲದೆ ಪ್ರತಿಯೊಂದು ಫ್ರಾಂಚೈಸಿಗಳು ಪ್ರತ್ಯೇಕವಾಗಿ ಪ್ರಯಾಣ ಮಾಡಲು ವಿಮಾನಗಳನ್ನು ಬುಕ್ ಮಾಡುವ ಪ್ರಕ್ರಿಯೆ ಕೂಡ ಶುರುವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹಾಗೇ ಟೀಮ್ ಇಂಡಿಯಾ ಆಟಗಾರರು ಆಗಸ್ಟ್ ಮೂರನೇ ವಾರ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟಂಬರ್ ಮೊದಲ ವಾರದ ನಂತರ ಆಟಗಾರರು ಫ್ರಾಂಚೈಸಿಗಳನ್ನು ಸೇರಿಕೊಳ್ಳಲಿದ್ದಾರೆ. ಇನ್ನು ಐಪಿಎಲ್ ಟೂರ್ನಿಯನ್ನು 5ರಿಂದ ಆರು ವಾರಗಳವರೆಗೆ ನಡೆಸಲಾಗುವುದು. ಇನ್ನು ಟೂರ್ನಿಯಲ್ಲಿ ಆಟಗಾರರ ಸುರಕ್ಷತೆ ಮತ್ತು ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು. ಪ್ರತಿಯೊಬ್ಬ ಆಟಗಾರನು ಕೂಡ ಕೋವಿಡ್ -19 ಮಾರ್ಗಸೂಚಿಗಳನ್ನು ಪಾಲಿಸಲೇಬೇಕು.
ಒಟ್ಟಿನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಬಿಸಿಸಿಐ ಸಜ್ಜುಗೊಳ್ಳುತ್ತಿದೆ. ಆದ್ರೆ ಕೇಂದ್ರ ಸರ್ಕಾರದ ಅನುಮತಿಯೂ ಬೇಕಾಗುತ್ತದೆ. ಪ್ರತಿಷ್ಠಿತ ದೇಶಿ ಟೂರ್ನಿಯಾಗಿರುವ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಟಿವಿಯಲ್ಲಿ ಮಾತ್ರ ನೋಡಬೇಕಾಗುತ್ತದೆ. ಪ್ರೇಕ್ಷಕರಿಲ್ಲದೆ ನಡೆಯುತ್ತಿರುವ ಮೊದಲ ಐಪಿಎಲ್ ಟೂರ್ನಿಯೂ ಇದಾಗಬಹುದು. ಈಗಾಗಲೇ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಪ್ರೇಕ್ಷಕರಿಲ್ಲದೆ ಆಡುತ್ತಿದೆ. ಹಾಗೇ ಸ್ಪೇನ್ ಮತ್ತು ಯುರೋಪಿಯನ್ ಫುಟ್‍ಬಾಲ್ ಟೂರ್ನಿಗಳು ಕೂಡ ಪ್ರೇಕ್ಷಕರಿಲ್ಲದೆ ನಡೆಯುತ್ತಿದೆ.








