ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿ ಅಲಿಯಾಸ್ ಸಿಜೆಪಿ ಎಂಬುದು ಒಂದು ದೇಶದ್ರೋಹಿ ಸಂಘಟನೆಯಾಗಿದ್ದು, ಅದರ ಮುಖ್ಯಸ್ಥ ಅಭಿಜಿತ್ ದೀಪ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ರಾಷ್ಟ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ದೇಶವಿರೋಧಿ ಸಂಘಟನೆಯ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಂತಿರುವುದು ಆಘಾತಕಾರಿ ಸಂಗತಿ. ಜಿರಳೆ ಪ್ರತಿಭಟನೆ ಹೆಸರಿನಲ್ಲಿ ದೇಶದ ಘನತೆಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಅವರಿಗೆ ರಾಜ್ಯದ ಜನರ ಸಂಕಷ್ಟಗಳಿಗಿಂತ ಇಂತಹ ಸಂಘಟನೆಗಳೇ ಮುಖ್ಯವಾಗಿವೆ ಎಂದು ಅವರು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅಶೋಕ್, ಈ ಸರ್ಕಾರ ರಾಜ್ಯದ ಜನರ ಮನೆ ಬಾಗಿಲಿಗೆ ಆತ್ಮಹತ್ಯೆಯನ್ನು ತಂದೊಡ್ಡಿದೆ. ಕೃಷಿ ಮತ್ತು ತೋಟಗಾರಿಕೆ ಸಚಿವರು ಎಲ್ಲಿದ್ದಾರೆ ಎಂಬ ಮಾಹಿತಿಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡುವವರು ಯಾರು? ಬರದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸದೆ ಕೇಂದ್ರದ ಕಡೆಗೆ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದ. ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ ಚಕ್ರವರ್ತಿ ಪಿಟೀಲು ಬಾರಿಸುತ್ತಿದ್ದನಂತೆ, ಹಾಗೆಯೇ ರಾಜ್ಯದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದರೆ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಜಕೀಯ ಮಾಡುತ್ತಾ ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಅಶೋಕ್, ಆರ್ಎಸ್ಎಸ್ ಬಗ್ಗೆ ಲೆಕ್ಕ ಕೇಳುವ ಮೊದಲು ನಿಮ್ಮ ಸ್ವಕ್ಷೇತ್ರದ ಪರಿಸ್ಥಿತಿಯನ್ನು ಗಮನಿಸಿ. ಕಲಬುರಗಿ ಜಿಲ್ಲೆಯ ಜನರು ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿದ್ದಾರೆ, ತಾಂಡಾಗಳು ಖಾಲಿಯಾಗುತ್ತಿವೆ. ಈ ಜನರ ಸಂಕಷ್ಟಕ್ಕೆ ಮೊದಲು ಉತ್ತರ ಕೊಡಿ, ಆಮೇಲೆ ಬೇರೆಯವರ ಲೆಕ್ಕ ಕೇಳಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರಕ್ಕೆ ಜನರ ಹಿತಾಸಕ್ತಿಗಿಂತ ದೆಹಲಿ ನಾಯಕತ್ವವನ್ನು ಓಲೈಸುವುದೇ ಮುಖ್ಯವಾಗಿದೆ ಎಂದು ಅಶೋಕ್ ಈ ಸಂದರ್ಭದಲ್ಲಿ ಟೀಕಿಸಿದರು.







