ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ಸರಣಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ಮಾಜಿ ಸಂಸದೆ ಹಾಗೂ ನಟಿ ದಿವ್ಯಾ ಸ್ಪಂದನಾ (ರಮ್ಯಾ) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷಾ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದ್ದು, ಪ್ರಧಾನಿ ಮೋದಿ ಅವರು ತಮ್ಮ ಅಹಂಕಾರವನ್ನು ಬದಿಗೊತ್ತಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ರಮ್ಯಾ, ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನೀಟ್ ಸೇರಿದಂತೆ ಸರಣಿ ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಈ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ನಿಲುವು ಅತ್ಯಂತ ಸರಿಯಾಗಿದೆ ಎಂದು ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರ ವಿರುದ್ಧ ಮಾರ್ಮಿಕವಾಗಿ ಟೀಕೆ ಮಾಡಿರುವ ದಿವ್ಯಾ ಸ್ಪಂದನಾ, ಕಬೀರ್ ದಾಸರ ಪ್ರಸಿದ್ಧ ದೋಹೆಯನ್ನು ಉಲ್ಲೇಖಿಸಿದ್ದಾರೆ. ಖರ್ಜೂರದ ಮರ ಎಷ್ಟೇ ಎತ್ತರಕ್ಕೆ ಬೆಳೆದರೂ ಅದು ಹಾದಿಹೋಕರಿಗೆ ನೆರಳು ನೀಡಲು ಸಾಧ್ಯವಿಲ್ಲ ಮತ್ತು ಅದರ ಹಣ್ಣುಗಳು ಕೈಗೆಟುಕದಷ್ಟು ದೂರದಲ್ಲಿರುತ್ತವೆ. ಅದೇ ರೀತಿ ಅಧಿಕಾರದಲ್ಲಿದ್ದು ಜನರಿಗೆ ಉಪಯೋಗವಾಗದಿದ್ದರೆ ಆ ಎತ್ತರಕ್ಕೆ ಬೆಳೆದು ಯಾವುದೇ ಫಲವಿಲ್ಲ ಎಂದು ಅವರು ಕುಟುಕಿದ್ದಾರೆ. ಹಿಂದೂ ಧರ್ಮವು ಮೊದಲಿಗೆ ಅಹಂಕಾರವನ್ನು ತೊರೆಯಲು ಬೋಧಿಸುತ್ತದೆ. ಆದರೆ ಪ್ರಧಾನಿಯವರು ತಮ್ಮ ಅಹಂನಿಂದಾಗಿ ಮೌನವಾಗಿದ್ದಾರೆ. ತಾವು ಫಕೀರ ಎಂದು ಹೇಳಿಕೊಳ್ಳುವ ಮೋದಿಯವರ ಮಾತಿಗೂ ಮತ್ತು ನಡವಳಿಕೆಗೂ ಯಾವುದೇ ಸಾಮ್ಯತೆಯಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಸಮಾನತೆ ಹೆಚ್ಚಾಗುತ್ತಿರುವುದಕ್ಕೆ ಕೇಂದ್ರದ ನೀತಿಗಳೇ ಕಾರಣ ಎಂದು ಆರೋಪಿಸಿರುವ ರಮ್ಯಾ, ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಕಷ್ಟಗಳಿಗೆ ಸ್ಪಂದಿಸದ ಈ ಸರ್ಕಾರ, ಅದಾನಿ ಮತ್ತು ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಮಾತ್ರ ಎಲ್ಲ ರೀತಿಯ ವಿನಾಯಿತಿ ಮತ್ತು ಸವಲತ್ತುಗಳನ್ನು ನೀಡುತ್ತಿದೆ ಎಂದು ನೇರ ಹೊಣೆ ಹೊರಿಸಿದ್ದಾರೆ.
ಪರೀಕ್ಷಾ ಅಕ್ರಮ ಮತ್ತು ಭವಿಷ್ಯದ ಅನಿಶ್ಚಿತತೆಯಿಂದ ಕಂಗಾಲಾಗಿರುವ ವಿದ್ಯಾರ್ಥಿಗಳ ಹೋರಾಟ ನ್ಯಾಯಯುತವಾಗಿದೆ. ವಿದ್ಯಾರ್ಥಿಗಳ ಈ ಕಷ್ಟದ ಸಮಯದಲ್ಲಿ ನಾನು ಅವರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇನೆ. ಕೇಂದ್ರ ಸರ್ಕಾರ ಕೂಡಲೇ ತನ್ನ ಹಠಮಾರಿ ಧೋರಣೆ ಬಿಟ್ಟು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ದಿವ್ಯಾ ಸ್ಪಂದನಾ ಒತ್ತಾಯಿಸಿದ್ದಾರೆ. ಇಂದಿನ ಯುವಜನತೆಯ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಎಂದು ಅವರು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.








