ನವದೆಹಲಿ: 2026ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ನೂತನ ಪರೀಕ್ಷಾ ಸುಧಾರಣಾ ಸಮಿತಿ ಇದೀಗ ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಐಐಟಿ ಮದ್ರಾಸ್ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ವಿ. ಕಾಮಕೋಟಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಗೋಮೂತ್ರ ತಜ್ಞ ಎಂದು ಲೇವಡಿ ಮಾಡಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ಹೊಸ ಬಿರುಗಾಳಿಯೇ ಎದ್ದಿದೆ.
ನೀಟ್ ಅಕ್ರಮವನ್ನು ಖಂಡಿಸಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದ ಸತತ ಪ್ರತಿಭಟನೆಗಳಿಗೆ ಮಣಿದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್ಟಿಎ) ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ಸುಧಾರಣೆ ತರಲು ಉನ್ನತ ಮಟ್ಟದ ಕಾರ್ಯಪಡೆಯೊಂದನ್ನು ರಚನೆ ಮಾಡಿದರು.
ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ನೇತೃತ್ವದ ಈ ಪ್ರತಿಷ್ಠಿತ ಸಮಿತಿಯಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಐಬಿ ಮಾಜಿ ನಿರ್ದೇಶಕ ತಪನ್ ದೇಕಾ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್, ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನಾ ಅವರ ಜೊತೆಗೆ ಐಐಟಿ-ಮದ್ರಾಸ್ ನಿರ್ದೇಶಕ ವಿ ಕಾಮಕೋಟಿ ಅವರನ್ನು ನೇಮಕ ಮಾಡಲಾಗಿತ್ತು.
ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕಾ ಗಾಂಧಿ, ಸರ್ಕಾರದ ನೂತನ ಸಮಿತಿ ರಚನೆಯನ್ನು ತೀವ್ರವಾಗಿ ಟೀಕಿಸಿದರು. ಪರೀಕ್ಷಾ ಸುಧಾರಣೆಯ ಈ ಹೊಸ ಸಮಿತಿಯಲ್ಲಿ ಒಬ್ಬರು ಮಾಜಿ ಐಬಿ ಮುಖ್ಯಸ್ಥರಿದ್ದಾರೆ, ಒಬ್ಬರು ಐಟಿ ಕಂಪನಿ ಮಾಲೀಕರಿದ್ದಾರೆ ಮತ್ತು ಮತ್ತೊಬ್ಬರು ಗೋಮೂತ್ರ ತಜ್ಞರು ಇದ್ದಾರೆ ಎಂದು ವಿ ಕಾಮಕೋಟಿ ಅವರ ಹೆಸರನ್ನು ಉಲ್ಲೇಖಿಸದೆ ವ್ಯಂಗ್ಯವಾಡಿದರು.
ಪ್ರಿಯಾಂಕಾ ಗಾಂಧಿ ಅವರ ಈ ಹೇಳಿಕೆಗೆ ಸದನದಲ್ಲಿಯೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಹಿರಿಯ ಬಿಜೆಪಿ ನಾಯಕ ಅನುರಾಗ್ ಠಾಕೂರ್, ಭಾರತದ ಅಗ್ರಗಣ್ಯ ವಿಜ್ಞಾನಿಗಳಲ್ಲಿ ಒಬ್ಬರಾದ ಕಾಮಕೋಟಿ ಅವರನ್ನು ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆ ಅತ್ಯಂತ ದುರದೃಷ್ಟಕರ ಎಂದರು. ಪ್ರಿಯಾಂಕಾ ಗಾಂಧಿ ಅವರು ತಮ್ಮ ಸಹೋದರ ರಾಹುಲ್ ಗಾಂಧಿಗಿಂತ ಬುದ್ಧಿವಂತರು ಎಂದು ನಾನು ಭಾವಿಸಿದ್ದೆ. ಆದರೆ ಐಐಟಿ ಮದ್ರಾಸ್ ನಿರ್ದೇಶಕರ ಬಗ್ಗೆ ಅವರು ಆಡಿದ ಮಾತನ್ನು ಕೇಳಿದರೆ ಅಣ್ಣ ತಂಗಿ ಇಬ್ಬರೂ ಒಂದೇ ಎಂದು ಸಾಬೀತಾಗಿದೆ. ಪ್ರಿಯಾಂಕಾ ಅವರ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಬಹುಶಃ ಅವರು ದಿನಾ ಗೋಮೂತ್ರ ಸೇವಿಸಬೇಕು ಎಂದು ಠಾಕೂರ್ ತಿರುಗೇಟು ನೀಡಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕಿಯಿಂದ ಟೀಕೆಗೆ ಗುರಿಯಾದ ವೀಝಿನಾಥನ್ ಕಾಮಕೋಟಿ ಅವರು ದೇಶದ ಹೆಮ್ಮೆಯ ತಂತ್ರಜ್ಞ. ಐಐಟಿ ಮದ್ರಾಸ್ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂಎಸ್ ಮತ್ತು ಪಿಎಚ್ಡಿ ಪದವಿ ಪಡೆದ ಅವರು 2022ರಲ್ಲಿ ಅದೇ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡರು.
ಕಂಪ್ಯೂಟರ್ ಆರ್ಕಿಟೆಕ್ಚರ್ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಅಪಾರ ಪರಿಣತಿ ಹೊಂದಿರುವ ಇವರ ನೇತೃತ್ವದ ಸಂಶೋಧನಾ ತಂಡವು ಭಾರತದ ಮೊಟ್ಟಮೊದಲ ಸ್ಥಳೀಯ ಮೈಕ್ರೋಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಿದ ಕೀರ್ತಿಗೆ ಭಾಜನವಾಗಿದೆ. ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರಾಗಿ, ಕೃತಕ ಬುದ್ಧಿಮತ್ತೆ (AI) ಕಾರ್ಯಪಡೆಯ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಡಿಆರ್ಡಿಒ ಅಕಾಡೆಮಿಕ್ ಎಕ್ಸಲೆನ್ಸ್ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರ ಅನನ್ಯ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಇದೇ ವರ್ಷ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಸಮಿತಿಯ ಸದಸ್ಯರಾಗಿ ನೇಮಕಗೊಂಡ ಬಳಿಕ 2026ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಮಾತನಾಡಿದ ವಿ ಕಾಮಕೋಟಿ ಅವರು, ಕಳೆದ ನಾಲ್ಕು ದಶಕಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಲ್ಲಿ ತಾಂತ್ರಿಕ ಅಳವಡಿಕೆ ಅನಿವಾರ್ಯವಾಗಿದೆ ಎಂದರು. ಯಾವುದೇ ಪರೀಕ್ಷಾ ವ್ಯವಸ್ಥೆಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವವರು ಮತ್ತು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಅತ್ಯಂತ ವಿಶ್ವಾಸಾರ್ಹರಾಗಿರಬೇಕು. ಪತ್ರಿಕೆಯನ್ನು ಸಿದ್ಧಪಡಿಸುವ, ಸಂಪೂರ್ಣ ಗೌಪ್ಯತೆ ಕಾಪಾಡುವ ನಿಷ್ಠಾವಂತ ಶಿಕ್ಷಕರ ಪಡೆಯ ಅಗತ್ಯ ನಮಗಿದೆ. ಮುಂಬರುವ ದಿನಗಳಲ್ಲಿ ಇಂತಹ ವಿಶ್ವಾಸವನ್ನು ಮರಳಿ ಗಳಿಸುವುದು ಮತ್ತು ಅದನ್ನು ಉಳಿಸಿಕೊಳ್ಳುವುದೇ ನಮ್ಮ ಮುಂದಿರುವ ಅತಿದೊಡ್ಡ ಸವಾಲು ಎಂದು ಕಾಮಕೋಟಿ ಸ್ಪಷ್ಟಪಡಿಸಿದರು.








