ಕೆಲವು ವರ್ಷಗಳ ಹಿಂದೆ..!
ಅದು ತ್ರಿಪುರಾದ ಬೆಲೋನಿಯಾ ಪ್ರದೇಶದ ಒಂದು ಸಣ್ಣ ಗ್ರಾಮ. ಅಲ್ಲೊಂದು ಮಣ್ಣಿನ ಗೋಡೆಯ ಮನೆಯಲ್ಲಿ ಬಡ ಕುಟುಂಬದ ವಾಸ. ದಿನದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ ಸಂಸಾರ. ಹಳ್ಳಿಯಲ್ಲೇ ಸೈಕಲ್ ರಿಪೇರಿ ಮಾಡೋದು ಆ ಮನೆಯ ಯಜಮಾನನ ಕಾಯಕ. ಮನೆಯ ಒಡತಿ ಗೃಹಿಣಿ. ಎರಡು ಹೆಣ್ಣು, ಒಂದು ಗಂಡು ಮಕ್ಕಳ ಸಣ್ಣ ಪರಿವಾರ. ಪ್ರತಿ ದಿನ ಸಂಪಾದನೆ ಮಾಡುತ್ತಿದ್ದ 300 ರೂಪಾಯಿಯೇ ಈ ಕುಟುಂಬದ ಆಧಾರ.
ಆದ್ರೆ ಈ ಮನೆಯ ಕಿರಿಯ ಮಗಳು ಮುಂದೊಂದು ದಿನ ಅಪ್ರತಿಮ ಕ್ರೀಡಾಪಟು ಆಗ್ತಾಳೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಚಿಕ್ಕ ಮಗಳು ಶಾಲಾ ಕ್ರೀಡಾಕೂಟಗಳಲ್ಲಿ 800 ಮೀಟರ್ ಓಡುತ್ತಿದ್ದಳು. ಮಗಳ ಕ್ರೀಡಾ ಆಸಕ್ತಿಯನ್ನು ಮನೆಯವರು ಬೇಡ ಅನ್ನಲಿಲ್ಲ. ಈ ನಡುವೆ, ಸ್ಥಳೀಯ ತರಬೇತುದಾರ ಈ ಹುಡುಗಿಗೆ ಜೂಡೋ ಸ್ಪರ್ಧೆಯತ್ತ ಗಮನಹರಿಸುವಂತೆ ಸಲಹೆ ನೀಡಿದ್ದ. ಆದ್ರೆ ಆಕೆಯ ಬಾಲ್ಯದ ಬದುಕಿನ ಪ್ರತಿ ಹಂತದಲ್ಲೂ ಬಡತನ, ಆರ್ಥಿಕ ಸಮಸ್ಯೆ ನೆರಳಿನಂತೆ ಕಾಡುತ್ತಿದ್ದವು.
ಆದ್ರೂ ಮಗಳ ಕನಸಿಗೆ ತಂದೆ ಅಡ್ಡಿಪಡಿಸಲಿಲ್ಲ. ಕಷ್ಟಪಟ್ಟು ಮಗಳ ಜೂಡೋ ಅಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದ. ಮಗಳ ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ಮುನ್ನಡೆಸಿದ್ದ. ಮೊಣಕಾಲಿಗೆ ಗಾಯವಾದಾಗ ದೆಹಲಿಯಲ್ಲಿ ಚಿಕಿತ್ಸೆ ನೀಡಿದ್ದ. ಕೈಯಲ್ಲಿ ದುಡ್ಡು ಇಲ್ಲದಿದ್ರೂ ಆಕೆಗೆ ಯಾವುದನ್ನು ಇಲ್ಲ ಅಂತ ಹೇಳಲಿಲ್ಲ. ತನ್ನ ಕಷ್ಟ, ನೋವುಗಳನ್ನು ಮರೆತು ಮಗಳ ಬಾಳಿಗೆ ಬೆಳಕಾಗಿ ನಿಂತಿದ್ದ. ಮಗಳ ಕ್ರೀಡಾ ಬದುಕಿಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದ. ಆಕೆಯ ಪ್ರತಿ ಯಶಸ್ಸನ್ನು ಕಂಡು ಹೆಮ್ಮೆಯಿಂದ ಬೀಗುತ್ತಿದ್ದ.
ಇವತ್ತು…,
ಪ್ರೀತಿಯ ಮಗಳು ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕದೊಂದಿಗೆ ಮಂದಹಾಸದ ನಗು ಬೀರಿದ್ದಾಳೆ. ವಿಪರ್ಯಾಸ ಅಂದ್ರೆ ಆ ಸುಂದರ ಕ್ಷಣವನ್ನು ನೋಡುವ ಭಾಗ್ಯ ಆ ತಂದೆಗಿಲ್ಲ. ಮಗಳ ಭವಿಷ್ಯವನ್ನು ರೂಪಿಸಿದ್ದ ಆತ, ಹತ್ತು ತಿಂಗಳ ಹಿಂದೆ ಈ ಲೋಕವನ್ನು ತ್ಯಜಿಸಿದ್ದಾನೆ. ಆದ್ರೂ ಆತನ “ಆತ್ಮ” ಮಗಳ ಅಪ್ರತಿಮ ಸಾಧನೆಯನ್ನು ನೋಡಿ ಸಂಭ್ರಮಿಸುತ್ತಿರಬಹುದು..!
ಅಪ್ಪ…. ಈ ಪದಕ ನಿನಗೆ ಅರ್ಪಣೆ..!
“ನಾನು ತ್ರಿಪುರಾದ ಸಣ್ಣ ಹಳ್ಳಿ¬ಂದ ಬಂದವಳು. ಅಲ್ಲಿನ ಜನರು ಇಷ್ಟೊಂದು ದೊಡ್ಡ ಕನಸು ಕಾಣುವುದಿಲ್ಲ. ಆದ್ರೆ ನನ್ನ ಅಪ್ಪ ದೊಡ್ಡ ಕನಸು ಕಾಣುವಂತೆ ನನ್ನನ್ನು ಬೆಳೆಸಿದ್ದರು. ಆರ್ಥಿಕ ಸಮಸ್ಯೆ ಇದ್ರೂ ನನ್ನ ಕ್ರೀಡಾ ಬದುಕಿಗೆ ಅಪ್ಪನೇ ಸಾಹುಕಾರ. ಅವರ ತ್ಯಾಗ ಮತ್ತು ಬೆಂಬಲದಿಂದಲೇ ನಾನು ಈ ಪೋಡಿಯಂ ಹತ್ತಿದ್ದೇನೆ. ವಿಪರ್ಯಾಸ ಅಂದ್ರೆ ಇವತ್ತು ಅವರು ನನ್ನೊಂದಿಗಿಲ್ಲ. ಆ ನೋವು ಕಾಡುತ್ತಿದೆ. ಅಪ್ಪ.. ಈ ಐತಿಹಾಸಿಕ ಚಿನ್ನದ ಪದಕ ನಿನಗೆ ಅರ್ಪಣೆ. ಲವ್ ಯೂ ಅಪ್ಪ. ಎಂದು ಹೇಳಿ ಭಾವುಕಳಾಗಿದ್ದಳು.
ಆಕೆಯ ಹೆಸರು ಅಸ್ಮಿತಾ ಡೇ.
ನಿಜಕ್ಕೂ “ಡೇ” ಎಂಬ ಸರ್ ನೇಮ್‍ನಂತೆ ಇವತ್ತು ಅಸ್ಮಿತಾಳ ದಿನವಾಗಿತ್ತು. ಮಹಿಳೆಯರ 48 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾಳೆ. ಕಾಮನ್‍ವೆಲ್ತ್ ಗೇಮ್ಸ್ ನ 36 ವರ್ಷಗಳ ಜೂಡೋ ಇತಿಹಾಸದಲ್ಲಿ ಭಾರತದ ಪದಕ ಬರವನ್ನು ನೀಗಿಸಿದ್ದಾಳೆ. ಅಲ್ಲದೆ ಭಾರತದ ಸ್ಪರ್ಧಿ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಮೊದಲ ಚಿನ್ನ ಗೆದ್ದ ಹಿರಿಮೆಗೂ ಪಾತ್ರಳಾಗಿದ್ದಾಳೆ.
ಜೂಡೋ ಬದುಕಿಗೆ ತಿರುವು ನೀಡಿದ ಕೋಚ್‍ಗಳು
ಅಸ್ಮಿತಾಳ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಬೆಲೋನಿಯ ವಿದ್ಯಾಪೀಠದ ಕೋಚ್ ಬಿನಾ ದೆಬ್ನಾತ್. ನಂತರ ಅಗರ್ತಲಾದ ತ್ರಿಪುರಾ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ಮಣಿಲಾಲ್ ಮತ್ತು ಪ್ರಣಬ್ ಸಾಹಾ ಮಾರ್ಗದರ್ಶನದಲ್ಲಿ ಕಠಿಣ ತರಬೇತಿಯನ್ನು ಪಡೆದಿದ್ದಳು. 2018ರಿಂದ ಭೋಪಾಲ್‍ನ ಸಾಯಿ ಕೇಂದ್ರದಲ್ಲಿ ಯಶ್‍ಪಾಲ್ ಸೋಂಕಿ ಗರಡಿಯಲ್ಲಿ ಅದ್ಭುತ ಜೂಡೋ ಸ್ಪರ್ಧಿಯಾಗಿ ರೂಪುಗೊಂಡಳು.
ಮಗಳ ಕನಸಿಗೆ ಅಪ್ಪನೇ ಪ್ರೇರಣೆ..!
ಜೂಡೋ ಸ್ಪರ್ಧೆಯಲ್ಲಿ ಮಗಳನ್ನು ಚಿನ್ನದ ಹುಡುಗಿಯಂತೆ ಬೆಳೆಸಿದ್ದ ಅಪ್ಪನ ಹೆಸರು ಅರ್ಜುನ್ ಕುಮಾರ್ ಡೇ. ತಾಯಿಯ ಹೆಸರು ಮುನ್ನಾ ಪತಾರಿ ಡೇ. ರಾಜ್ಯ, ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ಅಸ್ಮಿತಾ, ಜೂನಿಯರ್ ಏಷ್ಯನ್, ಏಷ್ಯನ್ ಓಪನ್, ಆಫ್ರಿಕನ್ ಓಪನ್‍ಗಳಲ್ಲಿ ಪದಕ ಗೆದ್ದಾಗ ಅರ್ಜುನ್ ಕುಮಾರ್‍ನ ಖುಷಿಗೆ ಪಾರವೇ ಇರಲಿಲ್ಲ. ಮಗಳ ಕನಸನ್ನು ನನಸು ಮಾಡಿದ್ದೆ ಎಂಬ ಸಮಾಧಾನ ಆತನಲ್ಲಿತ್ತು.
ಆದ್ರೆ ಕಳೆದ ವರ್ಷ ಅರ್ಜುನ್ ಬ್ರೇನ್‍ಸ್ಟ್ರೋಕ್‍ನಿಂದ ಚಿರನಿದ್ರೆಗೆ ಜಾರಿದಾಗ ಅಸ್ಮಿತಾಳ ಬದುಕು ಕತ್ತಲೆಯ ಕೋಣೆಯಾಗಿತ್ತು. ತನಗೆ ಆಧಾರವಾಗಿ ನಿಂತಿದ್ದ ತಂದೆಯ ಆಗಲಿಕೆ ಆಕೆಯನ್ನು ಘಾಸಿಗೊಳಿಸಿತ್ತು. ತಂದೆ ಇಲ್ಲದೇ ನನ್ನ ಕ್ರೀಡಾ ಜೀವನವೇ ಮುಗಿಯಿತ್ತು ಎಂದು ಅಂದುಕೊಂಡಿದ್ದಳು.
ಮಗಳಿಗೆ ಧೈರ್ಯ ತುಂಬಿದ ತಾಯಿ ಹೃದಯ…!
ಆ ಕತ್ತಲಿನ ಸಮಯದಲ್ಲಿ ಆಕೆಯ ಬದುಕಿಗೆ ಮತ್ತೆ ಬೆಳಕು ತೋರಿಸಿದ್ದು ತಾಯಿ ಮುನ್ನಾ. ಖಿನ್ನತೆಗೆ ಒಳಗಾಗಿದ್ದ ಅಸ್ಮಿತಾಗೆ ಅಮ್ಮನೇ ಧೈರ್ಯ ತುಂಬಿದ್ದಳು.
ತಂದೆಯ ಅಂತ್ಯಕ್ರಿಯೆ ಮುಗಿದು 10 ದಿನಗಳ ಬಳಿಕ ಅಭ್ಯಾಸಕ್ಕೆ ತೆರಳುವಂತೆ ತಾಯಿ ಒತ್ತಾಯ ಮಾಡಿದ್ದಳು.
“ಇಂದು ನಾನು ನಿನ್ನನ್ನು ಇಲ್ಲಿ ನಿಲ್ಲಿಸುವುದಿಲ್ಲ. ಒಂದು ವೇಳೆ ನಿಲ್ಲಿಸಿದ್ರೆ ನಿನ್ನ ತಂದೆಯ ಆತ್ಮಕ್ಕೆ ಸಮಾಧಾನವಿರಲ್ಲ. ನಿನ್ನ ತಂದೆ ನಿನ್ನ ಕನಸುಗಳು ನುಚ್ಚುನೂರಾಗುತ್ತಿದೆ ಎಂಬ ಭಾವಿಸುತ್ತಾರೆ ಎಂದು ಅಸ್ಮಿತಾಳಿಗೆ ಸಮಾಧಾನಪಡಿಸಿ, ಭೋಪಾಲ್‍ನ ಸಾಯಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಳು. ಬಳಿಕ 2023ರಲ್ಲಿ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಲಭಿಸಿತ್ತು. ಇದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ.
ನಿದ್ದೆ ಇಲ್ಲದ ರಾತ್ರಿಗಳು.. ತ್ಯಾಗ, ಶ್ರಮಕ್ಕೆ ಸಿಕ್ಕಿದ ಫಲ..!
ಅಸ್ಮಿತಾಳ ತಂದೆಯ ತ್ಯಾಗ, ತಾಯಿಯ ಧೈರ್ಯದ ಮಾತುಗಳೇ ಅಸ್ಮಿತಾಳನ್ನು ಬಂಗಾರದ ಹುಡುಗಿಯನ್ನಾಗಿಸಿದೆ. ಅಪ್ಪನ ಆಗಲಿಕೆಯ ನೋವು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಕಠಿಣ ಅಭ್ಯಾಸದ ದಣಿವು. ಜೊತೆಗೆ ಕಾಮನ್‍ವೆಲ್ತ್ ಕ್ರೀಡಾಕೂಟದ ಒತ್ತಡ. ಹೀಗೆ ಮಾನಸಿಕವಾಗಿ ಆಕೆಯನ್ನು ಆತಂಕಕ್ಕಿಡುವಂತೆ ಮಾಡಿತ್ತು.
“ನಾನು ಪ್ರತಿ ದಿನ ಬೆಳಗ್ಗೆ 5.30ಕ್ಕೆ ಏಳುತ್ತಿದ್ದೆ. ಅಭ್ಯಾಸದ ಸುಸ್ತು ಇದ್ರೂ ನಿದ್ರೆ ಮಾಡುತ್ತಿರಲಿಲ್ಲ. ಎಷ್ಟೇ ಆಯಾಸವಾಗಿದ್ರೂ ಅಭ್ಯಾಸವನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಮನಸ್ಸು ಜೂಡೋ ಸ್ಪರ್ಧೆಯ ತಂತ್ರ ಹಾಗೂ ಹೋರಾಟಗಳ ಬಗ್ಗೆಯೇ ಯೋಚನೆ ಮಾಡುತ್ತಿತ್ತು. ಪದಕ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೆ. ಆತ್ಮವಿಶ್ವಾಸದಿಂದಲೇ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದೆ” ಅಂತಾಳೆ ಅಸ್ಮಿತಾ.
“ಈ ಪದಕದ ಹಿಂದೆ ನನ್ನ ತರಬೇತುದಾರರ ಶ್ರಮ, ಮಾರ್ಗದರ್ಶನವಿದೆ. ಪದಕ ಗೆಲ್ಲಲು ನಾನು ಪರಿಶ್ರಮ ಶ್ರಮಪಟ್ಟಿದ್ದೇನೆ. ಸಾಕಷ್ಟು ತ್ಯಾಗ ಕೂಡ ಮಾಡಿದ್ದೇನೆ. ಕೆಲವೊಂದು ಸಣ್ಣಪುಟ್ಟ ತ್ಯಾಗಗಳನ್ನು ನೆನಪು ಮಾಡಿಕೊಂಡ್ರೆ ನಗು ಬರುತ್ತದೆ. ನಮ್ಮಣ್ಣ ಮನೆಯ ಫ್ರಿಜ್‍ನಲ್ಲಿ ನನ್ನ ಇಷ್ಟವಾದ ಲಾಂಗ್ ಲಟ್ಟಾ ಸಿಹಿ ತಿಂಡಿಯನ್ನು ಇಟ್ಟಿದ್ದ. ಅದನ್ನು ನೋಡಿದಾಗ ತಿನ್ನಬೇಕು ಎಂದು ಅನ್ನಿಸುತ್ತಿತ್ತು. ಕೆಲವೊಂದು ಬಾರಿ ತಿಂದ್ರೂ ನಂತರ ಆಸೆಪಡುವುದನ್ನೇ ಬಿಟ್ಟುಬಿಟ್ಟೆ. ಇದೀಗ ಪ್ರತಿಯೊಂದು ತ್ಯಾಗಕ್ಕೂ ಫಲ ಸಿಕ್ಕಿದೆ ಎಂದು ನಗುÀ ನಗುತ್ತಲೇ ಹೇಳಿದಳು ಅಸ್ಮಿತಾ.
ಒಟ್ಟಿನಲ್ಲಿ ಮಣ್ಣಿನ ಮನೆಯಲ್ಲಿ ಬಡತನದ ಕಣ್ಣೀರು ಸುರಿಸುತ್ತಿದ್ದ ಅಸ್ಮಿತಾ, ಇವತ್ತು ಕಾಮನ್‍ವೆಲ್ತ್ ಗೇಮ್ಸ್ ಅಂಗಣದಲ್ಲಿ ಆನಂದ ಬಾಸ್ಪ ಸುರಿಸಿದ್ದಾಳೆ. ಬದುಕಿನ ಕಷ್ಟದ ದಿನಗಳಲ್ಲಿ ಅಳುತ್ತಿದ್ದ ಈ ಹುಡುಗಿ ಇಂದು ಬಂಗಾರದ ಗೆದ್ದು ಭಾರತದ ರಾಷ್ಟ್ರಗೀತೆಯನ್ನು ಮೊಳಗುವಂತೆ ಮಾಡಿದ್ದಾಳೆ. ಇದು ಬಡತನ ಮತ್ತು ಪರಿಶ್ರಮದÀ ಬೆವರಿನ ಹನಿಗಳಲ್ಲಿ ಅರಳಿದ ಸುವರ್ಣಕಮಲ. ತನ್ನ ಹೆಸರಿನಂತೆ ಅಸ್ಮಿತಾ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾಳೆ. ಜೂಡೋ ಅಖಾಡದಲ್ಲಿ ಭಾರತದ ಹೆಸರನ್ನು ಜಗತ್ತಿಗೆ ಪರಿಚಯಿಸಿದ್ದಾಳೆ. ಇದು ಆರಂಭ..! ಕ್ರೀಡಾ ಬದುಕಿನ ಮುಂದಿನ ನಿಲ್ದಾಣ ಏಷ್ಯನ್ ಗೇಮ್ಸ್..!
ಸನತ್ ರೈ








