ಮುಂಬೈ: ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರನೌತ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರೈತ ಹೋರಾಟಗಾರರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಕಂಗನಾ, ಈಗ ದೇಶದ ಯುವ ಜನತೆಯ ವಿರುದ್ಧ ಅಂದರೆ ಜೆನ್ ಜಿ ತಲೆಮಾರಿನ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಯುವಕರನ್ನು ಜನರೇಷನ್ ಗಟರ್ ಎಂದು ಕರೆದಿರುವ ಕಂಗನಾ ಹೇಳಿಕೆಗೆ ರಿಯಲ್ ಹೀರೋ ಸೋನು ಸೂದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕರೇ ನಟರನ್ನು ಸೃಷ್ಟಿಸುವವರು
ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು ಸೂದ್, ಈ ದೇಶದ ಯುವಕರೇ ಒಬ್ಬ ಸಾಮಾನ್ಯ ನಟನನ್ನು ದೊಡ್ಡ ಮಟ್ಟದ ಸ್ಟಾರ್ ಆಗಿ ಬೆಳೆಸುತ್ತಾರೆ. ನಾವು ಇಂದು ಈ ಸ್ಥಾನದಲ್ಲಿ ಇದ್ದೇವೆ ಎಂದರೆ ಅದಕ್ಕೆ ಯುವ ಸಮುದಾಯದ ಬೆಂಬಲವೇ ಕಾರಣ. ಅವರ ಬೆಂಬಲ ಇರುವವರೆಗೆ ಮಾತ್ರ ನಟರು ಅಭಿವೃದ್ಧಿ ಹೊಂದಲು ಸಾಧ್ಯ. ಅಂತಹವರ ಬಗ್ಗೆ ಮಾತನಾಡುವಾಗ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಮನೋಭಾವ ಇರಬೇಕು ಎಂದು ಕಂಗನಾಗೆ ಬುದ್ಧಿ ಮಾತು ಹೇಳಿದ್ದಾರೆ.
ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ
ಕಂಗನಾ ಅವರು ಯುವಕರನ್ನು ಜನರೇಷನ್ ಗಟರ್ ಎಂದು ಕರೆದಿರುವ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಸೋನು, ಅವರು ಹಾಗೆ ಹೇಳಿದ್ದರೆ ಅದು ತುಂಬಾ ಅವಮಾನಕರ ಸಂಗತಿ. ಮಾತನಾಡುವ ಮೊದಲು ಪದಗಳ ಮೇಲೆ ನಿಗಾ ಇರಲಿ ಎಂಬ ಮಾತಿದೆ. ಸಾರ್ವಜನಿಕರು ದೇವರ ಮತ್ತೊಂದು ರೂಪ. ಅವರ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವುದು ನಿಜಕ್ಕೂ ನಾಚಿಕೆಗೇಡು ಎಂದು ಕಂಗನಾ ಅವರ ವಿರುದ್ಧ ಕಿಡಿಕಾರಿದ್ದಾರೆ.
ಹಳೆಯ ಮುನಿಸು ಮತ್ತೆ ಮುನ್ನೆಲೆಗೆ
ಸೋನು ಸೂದ್ ಮತ್ತು ಕಂಗನಾ ರನೌತ್ ನಡುವಿನ ಶೀತಲ ಸಮರ ಇಂದು ನಿನ್ನೆಯದಲ್ಲ. ಮಣಿಕರ್ಣಿಕಾ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸೋನು ಸೂದ್ ಅವರನ್ನು ಚಿತ್ರದಿಂದ ಹೊರಹಾಕಿದ್ದ ಕಂಗನಾ, ಅವರ ವಿರುದ್ಧ ಅಸಭ್ಯವಾಗಿ ಮಾತನಾಡಿದ್ದರು. ಮಾತ್ರವಲ್ಲದೆ ಸೋನು ಸೂದ್ ನಟಿಸಿದ್ದ ದೃಶ್ಯಗಳನ್ನು ಮರುಚಿತ್ರೀಕರಣ ಮಾಡಿದ್ದರು. ಅಂದಿನಿಂದ ಈ ಇಬ್ಬರ ನಡುವೆ ವೈಮನಸ್ಸು ಮುಂದುವರಿದಿದ್ದು, ಈಗ ಯುವ ಸಮುದಾಯದ ವಿಚಾರದಲ್ಲಿ ಸೋನು ಸೂದ್ ಅವರು ಕಂಗನಾಗೆ ಸರಿಯಾದ ತಿರುಗೇಟು ನೀಡಿದ್ದಾರೆ.
ಪೋಷಕರ ಆರ್ಥಿಕತೆಯ ಮೇಲೆ ಅವಲಂಬಿತರಾಗಿರುವ ಈ ತಲೆಮಾರಿಗೆ ಮಾದಕ ದ್ರವ್ಯ, ಪಾನೀಯ ಮತ್ತು ಲೈಂಗಿಕತೆಯೇ ಎಲ್ಲವೂ ಎಂದು ಕಂಗನಾ ಹೀಯಾಳಿಸಿದ್ದರು. ಕಂಗನಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸೋನು ಸೂದ್ ಅವರು ಯುವಕರ ಪರವಾಗಿ ಧ್ವನಿ ಎತ್ತಿರುವುದು ಈಗ ಚರ್ಚೆಗೆ ಕಾರಣವಾಗಿದೆ.








