ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವವರ ಪರವಾಗಿ ಬ್ಯಾಟ್ ಬೀಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ವಿರುದ್ಧ ಪೋಸ್ಟ್ ಹಾಕುವವರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಯಾವ ನ್ಯಾಯ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕನ ದ್ವಂದ್ವ ನಿಲುವು ಮತ್ತು ಬೂಟಾಟಿಕೆಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಟೀಕಿಸಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ನೀಟ್ ಪರೀಕ್ಷಾ ಅಕ್ರಮದ ವಿರುದ್ಧದ ಪ್ರತಿಭಟನೆಯಲ್ಲಿ ಕೆಲವರು ಪ್ರಧಾನಿ ಮೋದಿ ವಿರುದ್ಧ ಅತ್ಯಂತ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಕ್ರಮವನ್ನು ವಿರೋಧಿಸಿದ್ದ ರಾಹುಲ್ ಗಾಂಧಿ, ಮೋದಿ ಮತ್ತು ಅಮಿತ್ ಶಾ ಅವರು ಯುವ ಪೀಳಿಗೆಯ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಯುವಕರ ಮೇಲೆ ಎಫ್‌ಐಆರ್ ಹಾಕಿ ಬೆದರಿಸಬೇಡಿ ಎಂದು ಎಚ್ಚರಿಕೆ ನೀಡಿದ್ದರು.
ಆದರೆ ಇದೇ ವೇಳೆ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಎರಡು ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ವಿಷಯವನ್ನು ಪ್ರಸ್ತಾಪಿಸಿರುವ ಸುಮಲತಾ ಅಂಬರೀಶ್, ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ.
ನಿಮ್ಮನ್ನು ನಿಂದಿಸಿದರೆ ಕೇಸ್ ದಾಖಲಿಸುವುದು ಮತ್ತು ಪ್ರಧಾನಿ ಮೋದಿಯವರನ್ನು ನಿಂದಿಸಿದರೆ ಅದನ್ನು ಸಮರ್ಥಿಸಿಕೊಳ್ಳುವುದು ಯಾವ ರೀತಿಯ ವರಸೆ? ಇದನ್ನು ಬೂಟಾಟಿಕೆ ಎನ್ನದೆ ಮತ್ತೇನು ಹೇಳಬೇಕು ಎಂದು ಸುಮಲತಾ ಪ್ರಶ್ನಿಸಿದ್ದಾರೆ. ನಿಮ್ಮ ವಿರುದ್ಧದ ಟೀಕೆಗಳಿಗೆ ಒಂದು ಕಾನೂನು, ಬೇರೆಯವರ ವಿರುದ್ಧದ ಟೀಕೆಗಳಿಗೆ ಮತ್ತೊಂದು ಕಾನೂನು ಎಂಬ ರಾಹುಲ್ ಗಾಂಧಿ ನಿಲುವನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕಾಂಗ್ರೆಸ್, ತನ್ನ ನಾಯಕರ ವಿರುದ್ಧದ ಪೋಸ್ಟ್ ಬಂದಾಗ ಕಾನೂನು ಅಸ್ತ್ರ ಬಳಸುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಸುಮಲತಾ ಅವರ ಈ ಟಾಂಗ್ ಸದ್ಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.








