ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾರಿ ಹೋರಾಟಕ್ಕೆ ಕರೆ ನೀಡಿದೆ. ಆಗಸ್ಟ್ 4 ರಂದು ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ತಣ್ಣಗಾದ ಬೆನ್ನಲ್ಲೇ ಈಗ ಆಪ್ ನಾಯಕರು ರಸ್ತೆಗಿಳಿಯಲು ಸಜ್ಜಾಗಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ ಮತ್ತು ಇ20 ಇಂಧನ ನೀತಿಯಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂಬುದು ಆಪ್ ಆರೋಪ. ಈ ನಿಟ್ಟಿನಲ್ಲಿ ಈಗಾಗಲೇ ನಡೆಸಲಾದ ಟೌನ್‌ಹಾಲ್ ಸಭೆಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಸುಮಾರು 7 ಲಕ್ಷಕ್ಕೂ ಅಧಿಕ ಮಂದಿ ಈ ಸಭೆಯನ್ನು ವೀಕ್ಷಿಸಿದ್ದಾರೆ. ಇದೇ ಹುಮ್ಮಸ್ಸಿನಲ್ಲಿರುವ ಕೇಜ್ರಿವಾಲ್, ಆಗಸ್ಟ್ 4ರ ಮಧ್ಯಾಹ್ನ 12 ಗಂಟೆಗೆ ತಮ್ಮ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಪ್ರಧಾನಿ ನಿವಾಸಕ್ಕೆ ಮಾರ್ಚ್ ಮಾಡುವುದಾಗಿ ಘೋಷಿಸಿದ್ದಾರೆ.
ಕೇಜ್ರಿವಾಲ್ ಮುಂದಿಟ್ಟಿರುವ ಮೂರು ಪ್ರಮುಖ ಬೇಡಿಕೆಗಳು ಇಲ್ಲಿವೆ
1. ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಶುದ್ಧ ಪೆಟ್ರೋಲ್ ಅಥವಾ ಇ20 ಮಿಶ್ರಿತ ಪೆಟ್ರೋಲ್ ಆರಿಸಿಕೊಳ್ಳುವ ಮುಕ್ತ ಆಯ್ಕೆ ನೀಡಬೇಕು.
2. ಪೆಟ್ರೋಲ್ ಬೆಲೆಯನ್ನು ತಕ್ಷಣವೇ ಪ್ರತಿ ಲೀಟರ್‌ಗೆ 84 ರೂಪಾಯಿಗೆ ಇಳಿಕೆ ಮಾಡಬೇಕು.
3. ಎಥೆನಾಲ್ ಮೇಲಿನ ದರವನ್ನು ಗಣನೀಯವಾಗಿ ಕಡಿತಗೊಳಿಸಬೇಕು.
ಪ್ರಧಾನಿ ನಿವಾಸವು ಅತ್ಯಂತ ಸುರಕ್ಷಿತ ಮತ್ತು ನಿರ್ಬಂಧಿತ ಪ್ರದೇಶವಾಗಿದ್ದು, ಅಲ್ಲಿ ಯಾವುದೇ ರೀತಿಯ ಮೆರವಣಿಗೆ ಅಥವಾ ಪ್ರತಿಭಟನೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿದ್ದರೂ ಕೇಜ್ರಿವಾಲ್ ಮತ್ತು ತಂಡ ಮುತ್ತಿಗೆ ಹಾಕಲು ಮುಂದಾಗಿರುವುದು ದೆಹಲಿಯಲ್ಲಿ ದೊಡ್ಡ ಮಟ್ಟದ ಹೈಡ್ರಾಮಾಗೆ ಕಾರಣವಾಗುವ ಸಾಧ್ಯತೆಯಿದೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವುದು ಖಚಿತವಾಗಿದ್ದು, ಇದು ಮತ್ತೊಂದು ಸುತ್ತಿನ ಪೊಲೀಸ್ ಕಾರ್ಯಾಚರಣೆ ಮತ್ತು ಘರ್ಷಣೆಗೆ ನಾಂದಿ ಹಾಡಲಿದೆ.
ಹಿಂದೆ ರಾಹುಲ್ ಗಾಂಧಿ ಅವರು ನಡೆಸಿದ ಪ್ರತಿಭಟನೆಯ ಮಾದರಿಯಲ್ಲೇ ಕೇಜ್ರಿವಾಲ್ ಕೂಡ ಈ ಹೋರಾಟದ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ಈ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಆಗಸ್ಟ್ 4ರ ಈ ಪ್ರತಿಭಟನೆ ಇಡೀ ದೇಶದ ಗಮನ ಸೆಳೆಯುವುದು ಖಂಡಿತ.








