ಸರ್ಕಾರವು ಚೇಂಬರ್ಲೇನ್ ನಂತೆ ವರ್ತಿಸುತ್ತಿದೆ – ರಾಹುಲ್ ಗಾಂಧಿ
ಹೊಸದಿಲ್ಲಿ, ಜುಲೈ 19: ಚೀನಾದೊಂದಿಗಿನ ಗಡಿ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಟ್ವೀಟ್ ಮಾಡಿ ಇದಕ್ಕೆ ಭಾರತ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರವು ಚೇಂಬರ್ಲೇನ್ ನಂತೆ ವರ್ತಿಸುತ್ತಿದೆ ಮತ್ತು ಇದು ಚೀನಾವನ್ನು ಮತ್ತಷ್ಟು ಧೈರ್ಯಗೊಳಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

ತಮ್ಮ ಎರಡು ದಿನಗಳ ಲಡಾಖ್ ಭೇಟಿಯ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಡಿದ ಭಾಷಣವನ್ನು ತಮ್ಮ ಟ್ವೀಟ್ ಗೆ ರಾಹುಲ್ ಗಾಂಧಿ ಟ್ಯಾಗ್ ಮಾಡಿದ್ದಾರೆ. ಆ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಲಡಾಖ್ ನಲ್ಲಿನ ಗಡಿ ಸಂಘರ್ಷದ ಪರಿಹಾರಕ್ಕಾಗಿ ಚೀನಾದೊಂದಿಗೆ ಮಾತುಕತೆಗಳಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದ್ದರು. ಆದರೆ ಚೀನಾದೊಂದಿಗಿನ ಮಾತುಕತೆಯ ಅಂತಿಮ ಫಲಿತಾಂಶದ ಬಗ್ಗೆ ಯಾವುದೇ ಖಾತರಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಸಿಂಗ್ ವಿಶ್ವದ ಯಾವುದೇ ಶಕ್ತಿಯು ಭಾರತ ದೇಶದ ಭೂಮಿಯ ಒಂದು ಇಂಚು ಮುಟ್ಟಲು ಸಾಧ್ಯವಿಲ್ಲ ಎಂದು ಬಲವಾದ ಸಂದೇಶವನ್ನು ರವಾನಿಸಿದ್ದರು.
ಇದಕ್ಕೂ ಮುನ್ನ ರಾಹುಲ್ ಗಾಂಧಿ ಕೇಂದ್ರವನ್ನು , ‘ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಪ್ರಮಾದಗಳು ಭಾರತವನ್ನು ದುರ್ಬಲಗೊಳಿಸಿವೆ ಮತ್ತು ನಮ್ಮನ್ನು ದುರ್ಬಲಗೊಳಿಸಿವೆ’ ಎಂದು ಹೇಳಿದರು.








