ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಡಶಾಲೆಯಲ್ಲಿ ಬಂಡಾಯದ ಬೇಗುದಿ ಜೋರಾಗಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಗಳೂರಿನ ಹಿರಿಯ ಶಾಸಕ ಎಂ ಕೃಷ್ಣಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ತಾವು ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ನೇರ ಸಂದೇಶ ರವಾನಿಸಿದ್ದಾರೆ.
ಯಾವುದೇ ಆಫರ್ ಬೇಡ ಮಂತ್ರಿಗಿರಿಯೇ ಬೇಕು
ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಶಮನ ಮಾಡಲು ಕಾಂಗ್ರೆಸ್ ನಾಯಕರು ಎಂ ಕೃಷ್ಣಪ್ಪ ಅವರಿಗೆ ಹಲವು ಆಕರ್ಷಕ ಆಫರ್ ನೀಡಿದ್ದರು. ಕೃಷ್ಣಪ್ಪ ಅವರ ಪುತ್ರ ಪ್ರಿಯಾಕೃಷ್ಣ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ, ಜೊತೆಗೆ ಎಂ ಕೃಷ್ಣಪ್ಪ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನ ಅಥವಾ ಪ್ರಭಾವಿ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ನೀಡಲು ಪ್ರಸ್ತಾಪಿಸಲಾಗಿತ್ತು. ಆದರೆ, ಈ ಯಾವುದೇ ಸ್ಥಾನಮಾನಗಳನ್ನು ಸ್ವೀಕರಿಸಲು ಕೃಷ್ಣಪ್ಪ ನಿರಾಕರಿಸಿದ್ದಾರೆ. ನನಗೆ ಮಂತ್ರಿಗಿರಿ ಕೊಡಲೇಬೇಕು ಎಂದು ಅವರು ಪಟ್ಟು ಹಿಡಿದಿರುವುದು ಈಗ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ತಪ್ಪನ್ನು ಸರಿಪಡಿಸಿ ಇಲ್ಲದಿದ್ದರೆ ಮುಂದಿನ ಹಾದಿ ಬೇರೆ
ಸುದ್ದಿಗಾರರೊಂದಿಗೆ ಮಾತನಾಡಿದ ಎಂ ಕೃಷ್ಣಪ್ಪ, ಸಂಪುಟ ಆಯ್ಕೆಯಲ್ಲಿ ದೊಡ್ಡ ಮಿಸ್ಟೇಕ್ ಆಗಿದೆ ಎಂದು ನಾಯಕರೇ ಒಪ್ಪಿಕೊಂಡಿದ್ದಾರೆ. ಅದನ್ನು ಹೇಗೆ ಸರಿಪಡಿಸುತ್ತಾರೋ ಗೊತ್ತಿಲ್ಲ, ಆದರೆ ನನಗೆ ಸಚಿವ ಸ್ಥಾನ ಸಿಗಲೇಬೇಕು. ಈ ಹಿಂದೆ ನಾನು ಸಚಿವನಾಗಿ ಅತ್ಯುತ್ತಮ ಕೆಲಸ ಮಾಡಿದ್ದೇನೆ. ಸ್ವತಃ ಸಿದ್ದರಾಮಯ್ಯನವರೇ ನನ್ನ ಕೆಲಸವನ್ನು ಮೆಚ್ಚಿ ಹೊಗಳಿದ್ದರು. ಹೀಗಿದ್ದರೂ ಈಗ ನನ್ನನ್ನು ಕಡೆಗಣಿಸಿರುವುದು ಸರಿಯಲ್ಲ. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಮುಂದೆ ಏನು ಮಾಡಬೇಕು ಎಂಬುದನ್ನು ಗಂಭೀರವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮನವೊಲಿಕೆ ಕಸರತ್ತು ವಿಫಲ
ಬಂಡಾಯ ಎದ್ದಿರುವ ಕೃಷ್ಣಪ್ಪ ಅವರ ಮನವೊಲಿಸಲು ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಅವರು ಕೃಷ್ಣಪ್ಪ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಸಮಾಧಾನಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಕೃಷ್ಣಪ್ಪ ಮಾತ್ರ ತಮ್ಮ ಪಟ್ಟಿನಿಂದ ಹಿಂದೆ ಸರಿದಿಲ್ಲ. ಸಚಿವ ಸ್ಥಾನ ಸಿಗದ ಹೊರತು ಪ್ರತಿಭಟನೆಯ ಹಾದಿ ಬಿಡುವುದಿಲ್ಲ ಎಂಬ ಸುಳಿವು ನೀಡಿದ್ದಾರೆ.
ಪಕ್ಷಕ್ಕೆ ಡ್ಯಾಮೇಜ್ ಆಗುವ ಭೀತಿ
ಬೆಂಗಳೂರಿನಲ್ಲಿ ಪ್ರಭಾವಿ ನಾಯಕರಾಗಿರುವ ಎಂ ಕೃಷ್ಣಪ್ಪ ಅವರ ಅಸಮಾಧಾನ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಸಂಪುಟದಲ್ಲಿ ಸ್ಥಾನ ಸಿಗದೆ ಇರುವ ಇತರ ಆಕಾಂಕ್ಷಿಗಳು ಕೂಡ ಈಗ ಕೃಷ್ಣಪ್ಪ ಅವರ ಹಾದಿ ಹಿಡಿಯುವ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಕೃಷ್ಣಪ್ಪ ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹಿರಿಯ ಶಾಸಕರ ಈ ಬಂಡಾಯವನ್ನು ಸಿಎಂ ಡಿ ಕೆ ಶಿವಕುಮಾರ್ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.








