ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಪ್ರತಿ ದಿನವೂ ಹೊಸ ದಾಖಲೆ ಬರೆಯುತ್ತಿದೆ. ವಿಶೇಷವಾಗಿ ಯಾವುದೇ ಟೋಕನ್ ಇಲ್ಲದೆ ಧರ್ಮ ದರ್ಶನಕ್ಕೆ ಬರುವ ಸಾಮಾನ್ಯ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಶ್ರೀವಾರಿ ದರ್ಶನಕ್ಕಾಗಿ ಭಕ್ತರು ಬರೋಬ್ಬರಿ 18 ರಿಂದ 24 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಸುದೀರ್ಘ ಕಾಲ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರ ಹಸಿವು ನೀಗಿಸುವುದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಗೆ ದೊಡ್ಡ ಸವಾಲಾಗಿತ್ತು. ಈ ಸಮಸ್ಯೆಗೆ ಈಗ ಟಿಟಿಡಿ ಅತ್ಯಾಧುನಿಕ ಪರಿಹಾರವೊಂದನ್ನು ಕಂಡುಕೊಂಡಿದೆ.
ಅನ್ನಪ್ರಸಾದ ಹಂಚಿಕೆಗೆ ಹೈಟೆಕ್ ವ್ಯವಸ್ಥೆ
ಕ್ಯೂ ಲೈನ್‌ಗಳಲ್ಲಿ ನಿಂತಿರುವ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವಿತರಿಸುವಾಗ ನೂಕುನುಗ್ಗಲು ಉಂಟಾಗುವುದು ಮತ್ತು ಎಲ್ಲರಿಗೂ ಸಕಾಲದಲ್ಲಿ ಆಹಾರ ತಲುಪದ ಲಕ್ಷಣಗಳು ಕಂಡುಬರುತ್ತಿದ್ದವು. ಈ ಸಮಸ್ಯೆಯನ್ನು ಹೋಗಲಾಡಿಸಲು ಟಿಟಿಡಿ ಇಂಜಿನಿಯರ್‌ಗಳು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಲಗೇಜ್ ಸಾಗಿಸುವ ಕನ್ವೇಯರ್ ಬೆಲ್ಟ್ ಮಾದರಿಯಲ್ಲೇ ಮೂವಿಂಗ್ ಟೇಬಲ್ ಎಂಬ ವಿನೂತನ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹೈಟೆಕ್ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಈ ಮೂವಿಂಗ್ ಟೇಬಲ್ ಸದ್ಯ 7 ಮೀಟರ್ ಉದ್ದವಿದ್ದು, ಇದನ್ನು ಭಕ್ತರು ನಿಂತಿರುವ ಕ್ಯೂ ಲೈನ್ ಪಕ್ಕದಲ್ಲೇ ಅಳವಡಿಸಲಾಗಿದೆ. ಶ್ರೀವಾರಿ ಸೇವಕರು ಮೊದಲೇ ಅನ್ನಪ್ರಸಾದವನ್ನು ಪ್ಲೇಟ್‌ಗಳಲ್ಲಿ ಸಿದ್ಧಪಡಿಸಿ ಈ ಚಲಿಸುವ ಟೇಬಲ್ ಮೇಲೆ ಇರಿಸುತ್ತಾರೆ. ಟೇಬಲ್ ಚಲಿಸುತ್ತಿದ್ದಂತೆ ಭಕ್ತರು ತಮಗೆ ಬೇಕಾದ ಆಹಾರದ ಪ್ಲೇಟ್‌ಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಇದರಿಂದ ಸೇವಕರಿಗೆ ಶ್ರಮ ಕಡಿಮೆಯಾಗುವುದಲ್ಲದೆ, ಆಹಾರ ವಿತರಣೆಯಲ್ಲಿ ಶಿಸ್ತು ಮತ್ತು ವೇಗ ಹೆಚ್ಚಾಗಲಿದೆ.
ಸದ್ಯ ತಿರುಮಲದ ರಿಂಗ್ ರೋಡ್ ಬಳಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಿಧಾನದಿಂದ ಸಮಯ ಉಳಿತಾಯವಾಗುತ್ತಿರುವುದನ್ನು ಗಮನಿಸಿರುವ ಅಧಿಕಾರಿಗಳು, ಇದರ ಉದ್ದವನ್ನು 7 ಮೀಟರ್‌ನಿಂದ 15 ಮೀಟರ್‌ಗೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಮುಂಬರುವ ದಿನಗಳಲ್ಲಿ ವೈಕುಂಠ ಕ್ಯೂ ಕಾಂಪ್ಲೆಕ್ಸ್ 01, ಕ್ಯೂ ಕಾಂಪ್ಲೆಕ್ಸ್ 02 ಮತ್ತು ನಾರಾಯಣಗಿರಿ ಶೆಡ್‌ಗಳಲ್ಲೂ ಈ ಮೂವಿಂಗ್ ಟೇಬಲ್‌ಗಳನ್ನು ಅಳವಡಿಸಲು ಟಿಟಿಡಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ.
ಈ ಹೊಸ ತಂತ್ರಜ್ಞಾನದ ಬಳಕೆಯಿಂದಾಗಿ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತಿದ್ದರೂ, ಯಾರೂ ಹಸಿವಿನಿಂದ ಕಾಯದಂತೆ ಮತ್ತು ನೂಕುನುಗ್ಗಲು ಇಲ್ಲದೆ ಅನ್ನಪ್ರಸಾದ ಪಡೆಯುವಂತಾಗಲಿದೆ. ಟಿಟಿಡಿಯ ಈ ಜನಸ್ನೇಹಿ ನಿರ್ಧಾರಕ್ಕೆ ಭಕ್ತ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.








