ಭುವನೇಶ್ವರ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಧರ್ಮೇಂದ್ರ ಪ್ರಧಾನ್ ಅವರು ಇದೀಗ ತಮ್ಮ ಮೌನ ಮುರಿದಿದ್ದಾರೆ. ರಾಜೀನಾಮೆ ನೀಡಿದ ಎರಡು ವಾರಗಳ ಬಳಿಕ ಒಡಿಶಾದ ಭುವನೇಶ್ವರದಲ್ಲಿರುವ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ಜನ್ ಜಿ ಅಂದರೆ ಇಂದಿನ ಯುವ ಪೀಳಿಗೆಯ ರಾಜಕಾರಣಕ್ಕೆ ಬಲಿಪಶುವಾಗಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಯುವಜನತೆಯನ್ನು ದಾರಿತಪ್ಪಿಸಲಾಯಿತು
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯನ್ನು ಜನ್ ಜಿ ಪ್ರತಿಭಟನೆ ಎಂದು ಬಿಂಬಿಸಲಾಗಿತ್ತು. ಈ ಬಗ್ಗೆ ಮಾತನಾಡಿದ ಪ್ರಧಾನ್, ನೀಟ್ ಪರೀಕ್ಷೆಯ ವಿಚಾರದಲ್ಲಿ ಯುವಜನತೆಗೆ ತಪ್ಪು ಮಾಹಿತಿಯನ್ನು ಫೀಡ್ ಮಾಡಲಾಗಿತ್ತು. ಪ್ರತಿಭಟನಾ ನಿರತ ಯುವಕರನ್ನು ಹಾದಿ ತಪ್ಪಿಸುವ ಮೂಲಕ ನನ್ನ ರಾಜೀನಾಮೆಗೆ ಪಟ್ಟು ಹಿಡಿಯುವಂತೆ ಮಾಡಲಾಯಿತು. ಈ ಸಂಚಿನ ಪರಿಣಾಮವಾಗಿಯೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನಗೆ ಹುದ್ದೆ ಮುಖ್ಯವಲ್ಲ ಮಕ್ಕಳ ಭವಿಷ್ಯವೇ ಮುಖ್ಯ
ಸಚಿವ ಸ್ಥಾನ ಹೋದ ಬಗ್ಗೆ ನನಗೆ ಯಾವುದೇ ವೈಯಕ್ತಿಕ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಭಾರತದಲ್ಲಿ ಪ್ರತಿ ವರ್ಷ ಸುಮಾರು ಎರಡು ಕೋಟಿ ಮಕ್ಕಳು ಜನಿಸುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ಜನಿಸಿದ ಸುಮಾರು 20 ಕೋಟಿ ಮಕ್ಕಳು ಈ ದೇಶದ ಭವಿಷ್ಯ. ಅವರಿಗೆ ದೊಡ್ಡ ಆಕಾಂಕ್ಷೆಗಳಿವೆ ಮತ್ತು ಅವರು ಭಾರತವನ್ನು ವಿಶ್ವಗುರು ಮಾಡುವ ಶಕ್ತಿ ಹೊಂದಿದ್ದಾರೆ. ಅಂತಹ ಮಕ್ಕಳ ಹಿತದೃಷ್ಟಿಯಿಂದ ಮತ್ತು ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆಗಾಗಿ ನಾನು ನನ್ನ ಹುದ್ದೆಯನ್ನು ತ್ಯಜಿಸಿದ್ದೇನೆ. ನನಗೆ ಅಧಿಕಾರಕ್ಕಿಂತ ಮಕ್ಕಳ ಒಳಿತೇ ಮುಖ್ಯ ಎಂದು ಅವರು ಭಾವುಕರಾಗಿ ನುಡಿದರು.
ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ
ಇದೇ ಸಂದರ್ಭದಲ್ಲಿ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಬಿಜೆಡಿ ಪಕ್ಷದ ವಿರುದ್ಧ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ ನಡೆಸಿದರು. ರೈರಾಖೋಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಜಿಡಿ ಕಾರ್ಯಕರ್ತರು ನನ್ನ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗುತ್ತಿರುವುದು ಮತ್ತು ಪ್ರತಿಭಟನೆ ನಡೆಸುತ್ತಿರುವುದು ನವೀನ್ ಬಾಬು ಅವರ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ. ನಾನು ಈ ಮಣ್ಣಿನ ಮಗ, ರೈತನ ಮಗ. ನನ್ನನ್ನು ಹಿಂತಿರುಗಿ ಹೋಗಿ ಎಂದು ಹೇಳಿದರೂ ನಾನು ಇಲ್ಲಿಯೇ ಇರುತ್ತೇನೆ. ನನ್ನನ್ನು ಕೆಟ್ಟ ವ್ಯಕ್ತಿ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ನಾನು ಎಂದಿಗೂ ಒಡಿಶಾದ ಜನತೆಗೆ ಅಥವಾ ಈ ರಾಜ್ಯಕ್ಕೆ ಅವಮಾನ ತರುವಂತಹ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಜಗನ್ನಾಥನ ಆಶೀರ್ವಾದವೇ ಶ್ರೀರಕ್ಷೆ
ಕಳೆದ 12 ವರ್ಷಗಳ ಹಿಂದೆ ಜಗನ್ನಾಥ ದೇವರು ಮತ್ತು ಸಮಲೇಶ್ವರಿ ದೇವಿಯ ಆಶೀರ್ವಾದದಿಂದ ನಾನು ಕೇಂದ್ರ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದೆ. ರಾಜ್ಯದ ವೈಭವವನ್ನು ಹೆಚ್ಚಿಸಲು ಶ್ರಮಿಸಿದ್ದೇನೆಯೇ ಹೊರತು, ಅಪಖ್ಯಾತಿ ತರುವ ಕೆಲಸ ಮಾಡಿಲ್ಲ. ರಾಜಕೀಯ ವಿರೋಧಿಗಳು ಯುವಕರನ್ನು ಬಳಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಪ್ರಲ್ಹಾದ್ ಜೋಶಿ ಅವರು ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು, ಧರ್ಮೇಂದ್ರ ಪ್ರಧಾನ್ ಅವರ ಈ ಹೇಳಿಕೆಗಳು ಈಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ.








