ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಯೋಜನೆಯ 32ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಕುಟುಂಬದ ಯಜಮಾನಿಯರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ತಲುಪಲಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
2,443 ಕೋಟಿ ರೂಪಾಯಿ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತಿನ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ಸರ್ಕಾರ ಸಮಾಧಾನದ ಸುದ್ದಿ ನೀಡಿದೆ. ಒಟ್ಟು 2,443 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಡಿಬಿಟಿ ಮೂಲಕ ಹಣ ಜಮೆಯಾಗುವ ಪ್ರಕ್ರಿಯೆ ಆರಂಭವಾಗಿದೆ. ಇದುವರೆಗೆ ಪ್ರತಿ ಯಜಮಾನಿಗೆ ಒಟ್ಟು 62,000 ರೂಪಾಯಿ ತಲುಪಿದ್ದು, ಈ ಕಂತಿನ ಹಣ ಸೇರಿದರೆ ಕಾಂಗ್ರೆಸ್ ಸರ್ಕಾರವು ಪ್ರತಿ ಯಜಮಾನಿಗೆ ಒಟ್ಟು 64,000 ರೂಪಾಯಿ ನೀಡಿದಂತಾಗುತ್ತದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಅನರ್ಹರಿಗೆ ಬ್ರೇಕ್: ಮೃತ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ
ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತರಾದವರಲ್ಲಿ ಸುಮಾರು 1,95,224 ಫಲಾನುಭವಿಗಳು ಮೃತಪಟ್ಟಿದ್ದರೂ, ಅವರ ಖಾತೆಗಳಿಗೆ ಅಕ್ರಮವಾಗಿ 115 ಕೋಟಿ ರೂಪಾಯಿ ಹಣ ಸಂದಾಯವಾಗಿರುವುದು ಪತ್ತೆಯಾಗಿದೆ. ಈ ಅಕ್ರಮವನ್ನು ತಡೆಯಲು ಮೃತಪಟ್ಟ 15 ದಿನಗಳ ಒಳಗಾಗಿ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಅದೇ ರೀತಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆದು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಅನ್ನಭಾಗ್ಯದ ಬದಲಿಗೆ ಇಂದಿರಾ ಕಿಟ್ ಮತ್ತು ಪಡಿತರ ವ್ಯವಸ್ಥೆಯಲ್ಲಿ ಬದಲಾವಣೆ
ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲಾಗಿ ಹಣ ನೀಡುವ ಪದ್ಧತಿಯನ್ನು ಕೈಬಿಟ್ಟು, ಶೀಘ್ರದಲ್ಲೇ ಇಂದಿರಾ ಕಿಟ್ ವಿತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಜೊತೆಗೆ ರಾಜ್ಯದ 22 ಸಾವಿರ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆಯಲ್ಲಿ ಶಿಸ್ತು ತರಲು ಹೊಸ ಆದೇಶ ಹೊರಡಿಸಲಾಗುತ್ತಿದೆ. ಇನ್ಮುಂದೆ ಪಡಿತರ ಅಂಗಡಿಗಳು ದಿನಪೂರ್ತಿ ತೆರೆದಿರಬೇಕು ಮತ್ತು ಕಡ್ಡಾಯವಾಗಿ ಮಾಸಿಕ ಸಭೆಗಳನ್ನು ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂಬ ನಿಯಮ ಜಾರಿಗೆ ಬರಲಿದೆ. ಇದರಿಂದ ಸಾರ್ವಜನಿಕರಿಗೆ ಪಡಿತರ ವಿತರಣೆಯಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳು ನಿವಾರಣೆಯಾಗಲಿವೆ.








