ಜೇನು ಕೃಷಿ ಸಾಕಾಣಿಕೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಜೂನ್ 19: ಜೇನು ಕೃಷಿ ಸಾಕಾಣಿಕೆಗೆ ಸಹಾಯಧನ ನೀಡಲು ಅರ್ಹ ರೈತರಿಂದ ತೋಟಗಾರಿಕಾ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ.
ಮಧುವನ ಮತ್ತು ಜೇನು ಸಾಕಾಣಿಗೆ ಅಭಿವೃದ್ಧಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಹೆಚ್ಚು ಲಾಭ ಗಳಿಸಲು ಸಹಕಾರಿಯಾಗುವಂತೆ ಜೇನು ಸಾಕಾಣಿಕೆಗೆ ಶೇ. 75ರಂತೆ ರೂ. 3375 ಗಳ ಸಹಾಯಧನ ಲಭಿಸಲಿದೆ. ಜೇನು ಕೃಷಿಯು ಕಡಿಮೆ ಬಂಡವಾಳದಿಂದ ಎಲ್ಲಾ ಪ್ರದೇಶಗಳ ರೈತರು ಉಪಕಸುಬಾಗಿ ಅಥವಾ ಮುಖ್ಯ ಕಸುಬಾಗಿ ನಿರ್ವಹಿಸಬಹುದಾದ ಲಾಭದಾಯಕ ಉದ್ದಿಮೆಯಾಗಿದೆ. ಕೃಷಿ, ತೋಟಗಾರಿಕೆ, ಕೃಷಿ ಅರಣ್ಯ, ಕೃಷಿ ಪಶುಪಾಲನೆ ಮುಂತಾದ ಯಾವುದೇ ಸಮ್ಮಿಶ್ರ ಕೃಷಿ ಪದ್ಧತಿಗಳ ಸಂಪನ್ಮೂಲಗಳಿಗೆ ಸ್ಪರ್ಧೆಯೊಡ್ಡದೆ ಈ ಉದ್ದಿಮೆಯು ನಿಸರ್ಗದಲ್ಲಿನ ಉಪಸಂಪನ್ಮೂಲಗಳಾದ ಪರಾಗ ಮತ್ತು ಮಕರಂದವನ್ನು ಬಳಸಿಕೊಂಡು ಕೃಷಿಕರಿಗೆ ಲಾಭವನ್ನು ತಂದುಕೊಡುತ್ತದೆ.

ಹಲವಾರು ತೋಟಗಾರಿಕೆ ಬೆಳೆಗಳಲ್ಲಿ ಜೇನು ನೊಣಗಳು ಪರಾಗ ಸ್ಪರ್ಶದ ಮೂಲಕ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿ ಪರೋಕ್ಷವಾಗಿ ರೈತರ ಆದಾಯ ಹೆಚ್ಚಿಸಿದೆ.
ಜೇನುನೊಣಗಳ ಉಪಸ್ಥಿತಿಯಿಂದಾಗಿ ವಿವಿಧ ಇಳುವರಿಯು ಶೇಕಡಾವಾರು 20 ರಿಂದ 80ರವರೆಗೆ ಏರಿಕೆ ಕಾಣಬಹುದಾಗಿದ್ದು, ತೋಟಗಾರಿಕೆ ಬೆಳೆಗಳಾದ ಸೌತೆ, ಕುಂಬಳ, ದ್ರಾಕ್ಷಿ, ಸೀಬೆ, ಟೊಮ್ಯಾಟೊ, ಕಲ್ಲಂಗಡಿ, ತೆಂಗು, ಮಾವು, ಅಡಿಕೆ ಬೆಳೆಯಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ. ಏಲಕ್ಕಿ, ನಿಂಬೆ ಹಾಗೂ ತರಕಾರಿ ಬೆಳೆಗಳಾದ ಸೀಮೆಬದನೆ, ಹಾಗಲಕಾಯಿ, ಹೂವಿನ ಬೆಳೆಗಳು, ಔಷಧಿ ಹಾಗೂ ಸುಗಂಧ ದ್ತವ್ಯ ಬೆಳೆಗಳೆಲ್ಲವೂ ಜೇನುನೊಣಗಳ ಪರಾಗ ಸ್ಪರ್ಶದಿಂದ ಪ್ರಯೋಜನವನ್ನು ಹೊಂದುತ್ತವೆ.
ಜೇನು ಕೃಷಿ ಆರಂಭಿಸುವುದರಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭ ಗಳಿಸಬಹುದಾಗಿದ್ದು, ಉತ್ತಮ ಗುಣಮಟ್ಟದ ಹಾಗೂ ರೋಗರಹಿತ ಜೇನು ಕುಟುಂಬಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುವ ಹಾಗೂ ವಿತರಿಸುವ ಉದ್ದೇಶದಿಂದ ಖಾಸಗಿ ಮಧುವನಗಳ ಸ್ಥಾಪನೆಗೂ ಕೂಡ ಹೆಚ್ಚಿನ ಮಹತ್ವ ನೀಡಲಾಗಿದೆ.

ಆಸಕ್ತ ರೈತರು ಜುಲೈ 31ರೊಳಗೆ ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲಾತಿಗಳಾದ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಚೆಕ್ ಬಂದಿ, ಸ್ವಯಂ ಬೆಳೆ ದೃಢೀಕರಣ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಇತ್ಯಾದಿಗಳೊಂದಿಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಕೋವಿಡ್-19 ಸೋಂಕು ತೀವ್ರವಾಗಿ ಏರಿಕೆ ಕಂಡ ಹಿನ್ನೆಲೆಯಲ್ಲಿ ರೈತರು ನೇರವಾಗಿ ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








