ಬೆಂಗಳೂರು: ಸಾರ್ವಜನಿಕ ಸ್ಥಳಗಳ ಬಳಕೆಗೆ ಕಾನೂನು ಮತ್ತು ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಸರ್ಕಾರದ ನಿಲುವಿಗೆ ಬಿಜೆಪಿ ನಾಯಕರು ಆತಂಕಗೊಂಡಿದ್ದಾರೆ. ‘ಕುಂಬಳಕಾಯಿ ಕದ್ದವ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ’ ಗಾದೆಯಂತೆ ಬಿಜೆಪಿ ನಾಯಕರ ವರ್ತನೆ ಇದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವ್ಯಂಗ್ಯವಾಡಿದ್ದಾರೆ.
ಆರ್ಎಸ್ಎಸ್ ವಿರುದ್ಧ ಮಾತನಾಡಿದರೆ ಮನೆಯಿಂದ ಆಚೆ ಬರಲು ಸಾಧ್ಯವಿಲ್ಲ ಎಂಬ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಹೇಳಿಕೆಗೆ ಖಡಕ್ ತಿರುಗೇಟು ನೀಡಿರುವ ಸಚಿವರು, ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ಬೆದರಿಕೆಗೆ ತಾವೆಂದೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರ್ಎಸ್ಎಸ್ ಎನ್ನುವುದು ಭಯೋತ್ಪಾದಕ ಸಂಘಟನೆಯೇ?
ಆರ್ಎಸ್ಎಸ್ ಎದುರು ಹಾಕಿಕೊಂಡರೆ ಮನೆಯಿಂದ ಹೊರಬರಲು ಬಿಡುವುದಿಲ್ಲ ಎಂಬ ಆರ್ ಅಶೋಕ್ ಬೆದರಿಕೆಯ ಹಿಂದಿನ ಅರ್ಥವೇನು? ಆರ್ಎಸ್ಎಸ್ ಎನ್ನುವುದು ಒಂದು ಭಯೋತ್ಪಾದಕ ಸಂಘಟನೆಯೇ ಅಥವಾ ಪ್ರಶ್ನೆ ಮಾಡಿದವರನ್ನು ಮುಗಿಸಿಹಾಕುವ ಅಂಡರ್ವರ್ಲ್ಡ್ ಮಾಫಿಯಾನಾ? ಇಂತಹ ಬಹಿರಂಗ ಬೆದರಿಕೆಗಳನ್ನು ನೋಡಿದರೆ ಆರ್ಎಸ್ಎಸ್ ಕ್ರಿಮಿನಲ್ಗಳ ಸಮೂಹ ಇರಬಹುದೇ ಎಂಬ ಅನುಮಾನ ಉಂಟಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ನೇರವಾಗಿ ಪ್ರಶ್ನಿಸಿದ್ದಾರೆ.
ನಮ್ಮಲ್ಲಿ ಹರಿಯುತ್ತಿರುವುದು ಅಂಬೇಡ್ಕರ್ ರಕ್ತ
ತಮಗೆ ಬಂದಿರುವ ಬೆದರಿಕೆಗಳಿಗೆ ಸಡ್ಡು ಹೊಡೆದಿರುವ ಸಚಿವರು, ನಾನು ಮನೆಯಿಂದ ಆಚೆ ಬರುವುದಕ್ಕೆ ಮತ್ತು ಮುಕ್ತವಾಗಿ ಮಾತನಾಡುವುದಕ್ಕೆ ದೇಶದ ಸಂವಿಧಾನದ ಬೆಂಬಲವಿದೆ. ನಮಗೆ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ನೈತಿಕ ಧೈರ್ಯವಿದೆ. ನಿಮ್ಮ ಆರ್ಎಸ್ಎಸ್ನ ಗೊಡ್ಡು ದೊಣ್ಣೆಗಳಿಗೆ ಹೆದರಲು ನಮ್ಮಲ್ಲಿ ಹರಿಯುತ್ತಿರುವುದು ಸಾವರ್ಕರ್ ರಕ್ತವಲ್ಲ, ಬಾಬಾಸಾಹೇಬ್ ಅಂಬೇಡ್ಕರ್ ಅವರ ರಕ್ತ. ಅಂಬೇಡ್ಕರ್ ಅವರು ನಮಗೆ ಧೈರ್ಯವನ್ನು ಕಲಿಸಿದ್ದಾರೆಯೇ ಹೊರತು ಭಯವನ್ನಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕ ಆಸ್ತಿ ಮತ್ತು ಸರ್ಕಾರದ ನಿಯಮಗಳ ಪಾಲನೆಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಈ ವೇಳೆ ಪುನರುಚ್ಚರಿಸಿದ್ದಾರೆ.








