ಬೆಂಗಳೂರು: ಆಗಸ್ಟ್ 15 ರ ಇಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಜಿಲ್ಲಾ ಮಟ್ಟದ ಧ್ವಜಾರೋಹಣದಿಂದ ವಿನಾಯಿತಿ ಕೋರಿ ಸಚಿವ ಜಮೀರ್ ಅಹ್ಮದ್ ಖಾನ್ ಪತ್ರ ಬರೆದಿರುವ ವಿಚಾರವೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಬೆಂಕಿ ಹೊತ್ತಿಸಿದೆ. ಸಚಿವ ಜಮೀರ್ ಅಹ್ಮದ್ ಅವರ ಈ ನಡವಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದರೆ, ಯುಟಿ ಖಾದರ್ ಅವರು ಜಮೀರ್ ಪರವಾಗಿ ನಿಂತು ಸಮರ್ಥಿಸಿಕೊಂಡಿದ್ದಾರೆ.
ಖಾದರ್ ನೀಡಿದ ಸಮರ್ಥನೆ
ಸಚಿವ ಜಮೀರ್ ಅಹ್ಮದ್ ಪರವಾಗಿ ಧ್ವನಿ ಎತ್ತಿದ ಯುಟಿ ಖಾದರ್, ಜಮೀರ್ ಅವರಿಗೆ ಇರುವಷ್ಟು ದೇಶಪ್ರೇಮ ಬಹುಶಃ ಬಿಜೆಪಿಯ ಯಾವ ನಾಯಕರಿಗೂ ಇಲ್ಲ. ಅವರು ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ಯುವ ಮನೋಭಾವ ಹೊಂದಿರುವ ನಾಯಕ. ಇಂತಹ ನಾಯಕನ ದೇಶಪ್ರೇಮವನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಬಿಜೆಪಿ ನಾಯಕರಿಗಿಲ್ಲ ಎಂದು ತಿರುಗೇಟು ನೀಡಿದರು.
ಆರ್ ಅಶೋಕ್ ಕಿಡಿಕಾರಿದ್ದು ಹೀಗೆ
ಸಚಿವ ಜಮೀರ್ ಪತ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಸಮಯವಿಲ್ಲ ಎನ್ನುವ ಜಮೀರ್ ಅವರ ನಡೆ ದೇಶಕ್ಕೆ ಮಾಡಿದ ಭಾರಿ ಅಗೌರವವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಪ್ರಾಣತ್ಯಾಗ ಮಾಡಿದ್ದಾರೆ, ಜೈಲಿಗೆ ಹೋಗಿದ್ದಾರೆ, ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಆದರೆ ಕಾರು, ವಸತಿ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯ ಅನುಭವಿಸುವ ಒಬ್ಬ ಮಂತ್ರಿಗೆ ರಾಷ್ಟ್ರಧ್ವಜ ಹಾರಿಸಲು ಪುರುಸೊತ್ತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ಇಂತಹವರನ್ನು ಮಂತ್ರಿ ಮಾಡಿರುವ ಸರ್ಕಾರ ದೇಶಕ್ಕೆ ಅಪಮಾನ ಮಾಡುತ್ತಿದೆ ಎಂದು ಖಾರವಾಗಿ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ನೇರ ಸವಾಲು
ಇದೇ ವಿಚಾರವಾಗಿ ಆಕ್ರೋಶ ಹೊರಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಜಯನಗರ ಜಿಲ್ಲೆಯ ಉಸ್ತುವಾರಿಯಾಗಿದ್ದರೂ ಸ್ವಾತಂತ್ರ್ಯ ದಿನಾಚರಣೆಗೆ ಹೋಗದೆ ಉಪಚುನಾವಣೆ ಮತ್ತು ಪಕ್ಷದ ಸಂಘಟನೆಯ ನೆಪ ಹೇಳುವುದು ಸರಿಯಲ್ಲ. ಅಧಿಕಾರದ ಲಾಭ ಬೇಕು ಆದರೆ ರಾಷ್ಟ್ರೀಯ ಕರ್ತವ್ಯದ ಜವಾಬ್ದಾರಿ ಬೇಡ ಎಂದರೆ ಹೇಗೆ? ತ್ರಿವರ್ಣ ಧ್ವಜ ಹಾರಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಆದ್ಯ ಕರ್ತವ್ಯವಾಗಿದೆ. ಪಕ್ಷದ ಕೆಲಸವೇ ಮುಖ್ಯ ಎನ್ನುವುದಾದರೆ ಜಮೀರ್ ಅಹ್ಮದ್ ಮೊದಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಜಯೇಂದ್ರ ನೇರ ಸವಾಲು ಎಸೆದಿದ್ದಾರೆ.








