ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸತತ ಎರಡನೇ ವರ್ಷವೂ ಗೈರಾಗಿದ್ದಾರೆ. ದೇಶದ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬದ ಅಧಿಕೃತ ಸಮಾರಂಭಕ್ಕೆ ಮುಖ್ಯ ವಿರೋಧ ಪಕ್ಷದ ಪ್ರಮುಖ ನಾಯಕರೇ ಗೈರುಹಾಜರಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಸನ ವಿವಾದವೇ ಗೈರಿಗೆ ಕಾರಣವೇ?
2024ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇಳೆ ಸೃಷ್ಟಿಯಾಗಿದ್ದ ಆಸನ ವ್ಯವಸ್ಥೆ ಹಾಗೂ ಶಿಷ್ಟಾಚಾರದ ಉಲ್ಲಂಘನೆಯ ವಿವಾದವೇ ಇಬ್ಬರೂ ನಾಯಕರು ಈ ಬಾರಿಯೂ ಕೆಂಪುಕೋಟೆಯ ಸಮಾರಂಭದಿಂದ ದೂರ ಉಳಿಯಲು ಪ್ರಮುಖ ಕಾರಣ ಎನ್ನಲಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಹಾಗೂ ಗೌರವವಿರುತ್ತದೆ. ಆದರೆ, 2024 ರ ಸಮಾರಂಭದಲ್ಲಿ ಸಂಪ್ರದಾಯ ಮತ್ತು ಅಧಿಕೃತ ಶಿಷ್ಟಾಚಾರವನ್ನು ಸಂಪೂರ್ಣವಾಗಿ ಬದಿಗೊತ್ತಿ ರಾಹುಲ್ ಗಾಂಧಿ ಅವರಿಗೆ ಹಿಂಬದಿಯ ಸಾಲಿನಲ್ಲಿ ಆಸನ ನಿಗದಿಪಡಿಸಲಾಗಿತ್ತು. ಇದು ಕಾಂಗ್ರೆಸ್ ಸೇರಿದಂತೆ ಇಡೀ ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಆ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಕೇಂದ್ರ ರಕ್ಷಣಾ ಸಚಿವಾಲಯವು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಕ್ರೀಡಾಪಟುಗಳಿಗೆ ಮುಂಭಾಗದ ಸಾಲಿನಲ್ಲಿ ಗೌರವಪೂರ್ವಕ ಆಸನ ಕಲ್ಪಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿತ್ತು ಎಂದು ಸಮರ್ಥಿಸಿಕೊಂಡಿತ್ತು. ಆದರೆ, ಸರ್ಕಾರದ ಅಧಿಕೃತ ಶಿಷ್ಟಾಚಾರದ ಪ್ರಕಾರ ಯಾವುದೇ ರಾಷ್ಟ್ರೀಯ ಸಮಾರಂಭಗಳಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ಮೊದಲ ಸಾಲಿನಲ್ಲಿಯೇ ಆಸನ ಕಾಯ್ದಿರಿಸಬೇಕಾಗುತ್ತದೆ. ವಿಪಕ್ಷ ನಾಯಕನಿಗೆ ಹಿಂಬದಿಯ ಸಾಲಿನಲ್ಲಿ ಜಾಗ ನೀಡುವ ಮೂಲಕ ಸರ್ಕಾರವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಎಸಗಿದೆ ಎಂದು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು.
ಅಧಿಕೃತ ಶಿಷ್ಟಾಚಾರ ಪಾಲನೆಯಲ್ಲಿ ಸರ್ಕಾರ ತೋರಿದ ಉದಾಸಿನತೆಯಿಂದ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಅಗ್ರ ನಾಯಕರು, ಈ ಬಾರಿಯೂ ಕೆಂಪುಕೋಟೆಯ ಅಧಿಕೃತ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಸುದಿನದಲ್ಲೂ ವಿಪಕ್ಷ ನಾಯಕರ ಈ ಗೈರುಹಾಜರಿಯು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಕಂದಕ ಎಷ್ಟು ಆಳವಾಗಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.








