ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಜೈಲು ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ಜೈಲಿನ ಬ್ಯಾರಕ್‌ನಲ್ಲೇ ಪ್ರಜ್ವಲ್ ರೇವಣ್ಣ ಮೊಬೈಲ್ ಹಿಡಿದು ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಹಾಗೂ ಇತರೆ ನಿಷೇಧಿತ ವಸ್ತುಗಳ ಬಳಕೆಗೆ ಹೇಗೆ ಅವಕಾಶ ಸಿಕ್ಕಿತು ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದಾಗ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿತ್ತು ಎಂದು ವರದಿಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಜ್ವಲ್‌ಗೆ ಡಿಜಿಪಿ ತರಾಟೆ?
ಈ ಬೆಳವಣಿಗೆಗಳ ನಡುವೆ ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿ ಹಲವು ಬ್ಯಾರಕ್‌ಗಳನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ಗೂ ತೆರಳಿದ್ದ ಡಿಜಿಪಿ, ಸುಮಾರು 10–12 ನಿಮಿಷಗಳ ಕಾಲ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಜ್ವಲ್ ಬಳಿ ಮೊಬೈಲ್ ಪತ್ತೆಯಾಗಿರುವ ವಿಚಾರಕ್ಕೆ ಅಲೋಕ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಜೈಲು ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ನಿನ್ನಿಂದಲೇ ಇಡೀ ಇಲಾಖೆಯ ಮರ್ಯಾದೆ ಹಾಳಾಗಿದೆ. ನನ್ನ ವೃತ್ತಿಜೀವನದಲ್ಲಿ ಇಷ್ಟು ಬೇಸರವಾಗಿರಲಿಲ್ಲ ಎಂಬ ರೀತಿಯಲ್ಲಿ ಡಿಜಿಪಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣಗೆ ಮೊಬೈಲ್ ಹಾಗೂ ಪೆನ್‌ಡ್ರೈವ್ ದೊರೆತದ್ದು ಹೇಗೆ, ಅವುಗಳನ್ನು ಜೈಲಿನೊಳಗೆ ನೀಡಿದವರು ಯಾರು ಎಂಬುದರ ಕುರಿತು ತನಿಖೆ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಜೈಲು ಸಿಬ್ಬಂದಿಯ ಪಾತ್ರವೂ ಪರಿಶೀಲನೆಯಲ್ಲಿದೆ.







