ಬೆಂಗಳೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಮಹಿಳಾ ಬ್ಯಾರಕ್ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಸಾಲು ಸಾಲು ಅಕ್ರಮಗಳು ಹಾಗೂ ನಿಷೇಧಿತ ವಸ್ತುಗಳ ಪತ್ತೆ ವರದಿಗಳ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದ್ದು, ಮಹಿಳಾ ಕೈದಿಗಳ ಸ್ಥಿತಿಗತಿ ಹಾಗೂ ಕುಂದುಕೊರತೆಗಳ ಬಗ್ಗೆ ಆಯೋಗದ ಅಧ್ಯಕ್ಷರು ಸುದೀರ್ಘ ಚರ್ಚೆ ನಡೆಸಿದರು.
ಪವಿತ್ರಾ ಗೌಡ ಮಾನಸಿಕವಾಗಿ ಕಂಗಾಲಾಗಿದ್ದಾರೆ
ಜೈಲು ಪರಿಶೀಲನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ ನಾಗಲಕ್ಷ್ಮಿ ಚೌಧರಿ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪವಿತ್ರಾ ಗೌಡ ಜೈಲಿನಲ್ಲಿ ತುಂಬಾ ಡಿಸ್ಟರ್ಬ್ ಆಗಿದ್ದಾರೆ. ಅವರು ನನಗೆ ಮಗಳಿದ್ದಂತೆ. ಈ ಜಗತ್ತಿನಲ್ಲಿ ತಪ್ಪು ಮಾಡದಿರುವವರು ಯಾರೂ ಇಲ್ಲ. ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ, ಅವರು ಈಗಾಗಲೇ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಅವರ ಬಗ್ಗೆ ಹೊರಗಡೆ ಹರಡುತ್ತಿರುವ ಸುಳ್ಳು ಸುದ್ದಿಗಳು ಅವರನ್ನು ಮಾನಸಿಕವಾಗಿ ಕೊಲ್ಲುತ್ತಿವೆ ಎಂದು ಹೇಳಿದರು.
ಸಿಬ್ಬಂದಿ ಹೊರಗಿಟ್ಟು ಕೈದಿಗಳ ಜೊತೆ ರಹಸ್ಯ ಚರ್ಚೆ
ತಮ್ಮ ಭೇಟಿಯ ವೇಳೆ ಜೈಲು ಸಿಬ್ಬಂದಿಯನ್ನು ಹೊರಗಿಟ್ಟು ಮಹಿಳಾ ಕೈದಿಗಳೊಂದಿಗೆ ನೇರವಾಗಿ ಚರ್ಚಿಸಿದ ಆಯೋಗದ ಅಧ್ಯಕ್ಷರು, ಕೈದಿಗಳಿಗೆ ನೀಡಲಾಗುವ ಊಟವನ್ನು ಸ್ವತಃ ತಾವೇ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. ದಿನಸಿ ಮತ್ತು ತರಕಾರಿ ಸ್ಟೋರ್ ರೂಮ್ ಸ್ವಚ್ಛತೆಯನ್ನು ವೀಕ್ಷಿಸಿದರು. ಪ್ರಸ್ತುತ ಜೈಲಿನಲ್ಲಿ 200 ಮಂದಿ ಮಹಿಳಾ ಕೈದಿಗಳಿದ್ದು, ಆರು ಮಂದಿ ಬಿಡುಗಡೆಯಾಗಿದ್ದಾರೆ. ಜೈಲಿನಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ ಎಂಬ ವರದಿಗಳಿದ್ದರೂ, ತಮ್ಮ ಭೇಟಿಯಲ್ಲಿ ಅಂತಹ ಯಾವುದೇ ವಸ್ತುಗಳು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅನೇಕ ಮಹಿಳಾ ಕೈದಿಗಳಿಗೆ ಜಾಮೀನು ಸಿಕ್ಕಿದ್ದರೂ ಶ್ಯೂರಿಟಿ ನೀಡಲು ಅಥವಾ ದಂಡದ ಹಣ ಪಾವತಿಸಲು ಸಾದ್ಯವಾಗದೆ ಜೈಲಿನಲ್ಲೇ ಉಳಿದಿದ್ದಾರೆ. ನೈಜೀರಿಯಾ, ಸೌತ್ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳ 10 ಮಂದಿ ಪುಟ್ಟ ಮಕ್ಕಳು ಜೈಲಿನಲ್ಲಿದ್ದು, ಜೈಲಿನ ಅಂಗನವಾಡಿಯ ನಾಲ್ವರು ಶಿಕ್ಷಕರಿಂದ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ಕಲಿಯುತ್ತಿರುವುದು ಸಂತಸ ತಂದಿದೆ. ತಪ್ಪು ಮಾಡಿದ ಪ್ರತಿಯೊಬ್ಬರೂ ತಮ್ಮವರ ಅಪ್ಪುಗೆಗಾಗಿ ಕಾಯುತ್ತಿದ್ದಾರೆ, ಇದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು ಎಂದು ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ಇದೇ ವೇಳೆ ಮಹಿಳಾ ಕೈದಿಗಳು ಜೈಲಿನಲ್ಲಿ ಸೊಳ್ಳೆಕಾಟದ ಬಗ್ಗೆ ದೂರು ನೀಡಿದ್ದು, ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಜೈಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೈದಿಗಳು ತಯಾರಿಸುವ ಕರಕುಶಲ ವಸ್ತುಗಳನ್ನು ಶ್ಲಾಘಿಸಿದ ಅಧ್ಯಕ್ಷರು, ಜೈಲಿನ ಆಡಳಿತ ವ್ಯವಸ್ಥೆ ಮತ್ತು ಕೈದಿಗಳ ಮಾನವ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.








