ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣ ಇದೀಗ ಎರಡು ರಾಜ್ಯಗಳ ನಡುವೆ ತೀವ್ರ ರಾಜಕೀಯ ಹಾಗೂ ಆಡಳಿತಾತ್ಮಕ ಸಂಚಲನ ಮೂಡಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂದೇ ನಡೆದ ಈ ದುರಂತ ಘಟನೆಯಲ್ಲಿ ಮೃತಪಟ್ಟ ತಮಿಳುನಾಡು ಮೂಲದ ಮೂವರ ಕುಟುಂಬಗಳಿಗೆ ನೆರೆಯ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಈ ಮೂಲಕ ಕರ್ನಾಟಕ ಸರ್ಕಾರ ನೀಡಿದ ಪರಿಹಾರಕ್ಕಿಂತ ಹೆಚ್ಚಿನ ಮೊತ್ತವನ್ನು ತಮಿಳುನಾಡು ಸರ್ಕಾರ ಪ್ರಕಟಿಸಿದಂತಾಗಿದೆ.
ತಮಿಳುನಾಡು ಸದನದಲ್ಲಿ ಗಲಾಟೆ, ಸಿಬಿಐ ತನಿಖೆಗೆ ಒತ್ತಾಯ
ಈ ಶೂಟೌಟ್ ಪ್ರಕರಣವು ತಮಿಳುನಾಡು ವಿಧಾನಸಭೆಯಲ್ಲೂ ಭಾರೀ ಸದ್ದು ಮಾಡಿದೆ. ಅಧಿವೇಶನದಲ್ಲಿ ವಿರೋಧ ಪಕ್ಷಗಳಾದ ಡಿಎಂಕೆ ಹಾಗೂ ಎಐಡಿಎಂಕೆ ನಾಯಕರು ಈ ವಿಷಯವನ್ನು ಪ್ರಸ್ತಾಪಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಸದನದಲ್ಲಿ ಅಧಿಕೃತವಾಗಿ ಘೋಷಿಸಿದರು. ಅಷ್ಟೇ ಅಲ್ಲದೆ, ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ತಕ್ಷಣವೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ತಮಿಳುನಾಡು ಸರ್ಕಾರ ಪಟ್ಟು ಹಿಡಿದಿದೆ.
ಕರ್ನಾಟಕ ಅರಣ್ಯ ಇಲಾಖೆ ನಡೆಗೆ ತಮಿಳುನಾಡು ಸಿಎಂ ಖಂಡನೆ
ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್, ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿ ಅತ್ಯಂತ ಹೃದಯವಿದ್ರಾವಕವಾಗಿದೆ. ಈ ಹತ್ಯಾಕಾಂಡವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕರ್ನಾಟಕ ಅರಣ್ಯ ಇಲಾಖೆ ನೀಡುತ್ತಿರುವ ಸಮಜಾಯಿಷಿ ಸ್ವೀಕಾರಾರ್ಹವಲ್ಲ. ಇಂತಹ ಕ್ರೂರ ಘಟನೆಯ ಕುರಿತು ಕರ್ನಾಟಕ ಸರ್ಕಾರ ಪ್ರಾಮಾಣಿಕ ಹಾಗೂ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚನೆ ಮಾಡಬೇಕು. ಮೂವರ ಜೀವ ತೆಗೆದಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ದಿನದಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಸಮೀಪದ ಮರಿಮಂಗಲ ಬೀಟ್ನಲ್ಲಿ ಈ ಘಟನೆ ನಡೆದಿತ್ತು. ಅರಣ್ಯ ಸಿಬ್ಬಂದಿ ನಡೆಸಿದ ಶೂಟೌಟ್ನಲ್ಲಿ ತಮಿಳುನಾಡು ಮೂಲದ ಆಂಥೋನಿ ಸಾಮಿ, ಕುಮಾರ್ ಮತ್ತು ಜಾನ್ ರೋಸ್ ಎಂಬುವವರು ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಆದರೆ ಸ್ಥಳೀಯ ಶಾಸಕ ಎಂ.ಆರ್. ಮಂಜುನಾಥ್ ಅವರು ವೈಯಕ್ತಿಕವಾಗಿ ತಲಾ 10 ಲಕ್ಷ ರೂಪಾಯಿ ನೆರವು ಹಸ್ತಾಂತರಿಸಿದ್ದರು. ಇದೀಗ ತಮಿಳುನಾಡು ಸರ್ಕಾರವೂ ತಲಾ 10 ಲಕ್ಷ ರೂಪಾಯಿ ಘೋಷಿಸುವ ಮೂಲಕ, ಕರ್ನಾಟಕ ರಾಜ್ಯ ಸರ್ಕಾರ ನೀಡಿದ ಮೊತ್ತಕ್ಕಿಂತ 5 ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ನೀಡಿದಂತಾಗಿದೆ.
ಇತ್ತ ಕರ್ನಾಟಕ ವಿಧಾನಸಭೆಯಲ್ಲೂ ಈ ಶೂಟೌಟ್ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರು ಅರಣ್ಯ ಇಲಾಖೆಯ ನಡೆಯನ್ನು ಪ್ರಶ್ನಿಸಿ ಸರಣಿ ಪ್ರಶ್ನೆಗಳನ್ನು ಎಸೆದರು. ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಕೇವಲ ತಮ್ಮ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.








